ಸೋಮವಾರಪೇಟೆ, ಮಾ. 15: ಸಮೀಪದ ಹಾನಗಲ್ಲು ಬಾಣೆಯಿಂದ ಕಾನ್ವೆಂಟ್‍ಬಾಣೆಗೆ ಸಂಪರ್ಕ ಕಲ್ಪಿಸುವ ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ರೂ. 5 ಲಕ್ಷ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದು, ಈ ಎರಡೂ ಗ್ರಾಮಗಳ ಗ್ರಾಮಸ್ಥರ ಹಲವು ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ಸಂಪರ್ಕ ರಸ್ತೆ ಹಾಗೂ ಸೇತುವೆಯ ಕೊರತೆಯಿಂದ ಎರಡೂ ಗ್ರಾಮಗಳ ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ‘ಶಕ್ತಿ’ಯಲ್ಲಿ ಕಳೆದ ಜ. 30 ರಂದು ವಿಸ್ತøತ ವರದಿ ಪ್ರಕಟವಾಗಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ರಂಜನ್ ಅವರು, ಅಭಿಯಂತರ ವೀರೇಂದ್ರ ಅವರಿಗೆ ಕರೆಮಾಡಿ ಸ್ಥಳಕ್ಕೆ ಕರೆಸಿಕೊಂಡು ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸುವಂತೆ ಸೂಚಿಸಿದರಲ್ಲದೆ, ರಸ್ತೆ ಬದಿಯ ಜಾಗದ ಮಾಲೀಕರನ್ನು ಕರೆಸಿ ಮಾತುಕತೆ ನಡೆಸಿ, ರಸ್ತೆ ನಿರ್ಮಾಣಕ್ಕೆ ಜಾಗ ಬಿಡುವಂತೆ ಮನವೊಲಿಸಿದರು. ಶಾಸಕರು ಕಿರು ಸೇತುವೆ ನಿರ್ಮಾಣಕ್ಕೆ ರೂ. 5 ಲಕ್ಷ ಅನುದಾನ ನೀಡುತ್ತಿದ್ದು, ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರ ಚಂಗಪ್ಪ ಅವರಿಗೆ ಸೂಚಿಸಿದ್ದಾರೆ. - ವಿಜಯ್