ಮಡಿಕೇರಿ, ಮಾ. 15: ಕೊಡಗು ರಾಜ್ಯದ ಪುಟ್ಟ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಕೇವಲ ಎರಡು ವಿಧಾನಸಭಾ ಕ್ಷೇತ್ರಗಳು ಮಾತ್ರ ಇವೆ. ಆದರೂ ಜಿಲ್ಲೆ ಇಡೀ ರಾಜ್ಯದಲ್ಲಿ ರಾಜಕೀಯವಾಗಿ ವಿಶೇಷ ಗಮನ ಸೆಳೆದಿದೆ. ಮಾಜಿ ಸಚಿವ ಯಂ.ಸಿ.ನಾಣಯ್ಯ ಅವರ ಹೆಸರು ಇಡೀ ರಾಜ್ಯಕ್ಕೆ ಚಿರಪರಿಚಿತ. ಅದರಂತೆ ಕೆ.ಜಿ. ಬೋಪಯ್ಯ ಅವರು ಸ್ಪೀಕರ್ರಂತಹ ಅತ್ಯುನ್ನತ ಸ್ಥಾನ ಅಲಂಕರಿಸಿ ಗುರುತಿಸಿಕೊಂಡಿದ್ದಾರೆ. ಇವರ ಸಾಲಿನಲ್ಲಿ ಮಾಜಿ ಸಚಿವರುಗಳಾಗಿರುವ ಎ.ಎಂ. ಬೆಳ್ಳಿಯಪ್ಪ, ಡಿ.ಎ. ಚಿಣ್ಣಪ್ಪ, ಬಿ.ಎ. ಜೀವಿಜಯ, ಸುಮಾವಸಂತ್, ಎಂ.ಎಂ. ನಾಣಯ್ಯ, ಟಿ.ಜಾನ್ ಅವರುಗಳು ಹೆಸರು ಮಾಡಿದ್ದಾರೆ. ಹಾಲಿ ಶಾಸಕರಾಗಿರುವ ಅಪ್ಪಚ್ಚುರಂಜನ್ ಅವರು ಕೂಡ ಮಾಜಿ ಸಚಿವರಾಗಿದ್ದು, ಅಲ್ಪಾವಧಿಯಲ್ಲಿ ಹೆಸರು ಮಾಡಿದ್ದರು. ಇವರೊಂದಿಗೆ ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿ ವೀಣಾ ಅಚ್ಚಯ್ಯ ಹಾಗೂ ಸುನಿಲ್ ಸುಬ್ರಮಣಿ ಇದ್ದರೆ, ನಿಗಮ ಮಂಡಳಿ ಅಧ್ಯಕ್ಷರಾಗಿ ಟಿ.ಪಿ. ರಮೇಶ್, ಪದ್ಮಿನಿ ಪೊನ್ನಪ್ಪ ಅವರಿದ್ದಾರೆ. ಎ.ಕೆ. ಸುಬ್ಬಯ್ಯ ಅವರು ವಿಪಕ್ಷ ನಾಯಕರಾಗಿ ಕೆಲಸ ನಿರ್ವಹಿಸಿದ್ದು, ಇವರ ಸಿಡಿಲಬ್ಬರ ಎಲ್ಲರಿಗೂ ಗೊತ್ತು... ಹೀಗೆ- ಜಿಲ್ಲೆ ಚಿಕ್ಕದಾದರೂ ರಾಜಕೀಯದಲ್ಲಿ ಹೆಸರು ಮಾಡಿದೆ. ಇಂತಹ ಜಿಲ್ಲೆಯಲ್ಲಿ ಪ್ರಸ್ತುತ ರಾಜಕೀಯ ಅಸ್ಥಿರತೆ ಕಂಡು ಬರುತ್ತಿದೆ.
ಜಿಲ್ಲೆಯಲ್ಲಿರುವದು ಪ್ರಮುಖವಾಗಿ ಮೂರು ರಾಜಕೀಯ ಪಕ್ಷಗಳು, ಸಿಪಿಐಎಂ, ಎಸ್.ಡಿ.ಪಿ.ಐ.ಯಂತಹ ಪಕ್ಷಗಳಿದ್ದರೂ ಮೇರು ಮಟ್ಟದಲ್ಲಿರುವದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು... ಇತ್ತೀಚಿನ ದಿನಗಳಲ್ಲಿ ಈ ಮೂರು ಪಕ್ಷಗಳಲ್ಲೂ ಆಂತರಿಕ ಭಿನ್ನಾಭಿಪ್ರಾಯ ಗಳು ಬಹಿರಂಗಗೊಳ್ಳುತ್ತಿವೆ. ಮುಖಂಡರುಗಳ ನಡುವಿನ ಪ್ರತಿಷ್ಠೆ, ಜಾತಿ ಲೆಕ್ಕಾಚಾರ, ಪರಸ್ಪರ ಕಾಳೆಲೆದಿರುವದು, ಇದಕ್ಕೆ ಪ್ರತಿಯಾಗಿ ಕಾಲೆಳೆಯುತ್ತಿರುವದು... ಇತ್ಯಾದಿ ವಿಚಾರಗಳಿಂದ ಮೂರು ಪಕ್ಷಗಳಲ್ಲೂ ಈ ಹಿಂದಿನಂತೆ ಸ್ಥಿರತೆ ಕಂಡು ಬರುತ್ತಿಲ್ಲ. ಇದಕ್ಕೆ ಉದಾಹರಣೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳ ಜಿಲ್ಲಾ ಅಧ್ಯಕ್ಷ ಸ್ಥಾನದ ವಿಚಾರ. 2015ರ ನವೆಂಬರ್ 10ರಂದು ನಡೆದ ಟಿಪ್ಪು ಜಯಂತಿಯ ಪರಿಣಾಮ ಆಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ದಿ. ಬಿ.ಟಿ. ಪ್ರದೀಪ್ ಅವರು ತಮ್ಮ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇವರು ಅಧಿಕಾರ ಕಳೆದುಕೊಂಡ ಬಳಿಕ ಟಿ.ಪಿ. ರಮೇಶ್ ಪ್ರಬಾರ ಅಧ್ಯಕ್ಷರಾಗಿದ್ದು, 15 ತಿಂಗಳು ಕಳೆದರೂ ಹೊಸ ಅಧ್ಯಕ್ಷರ ನೇಮಕವೇ ಆಗಿಲ್ಲ. ಈ ನಡುವೆ ಕಾಂಗ್ರೆಸ್ನಲ್ಲಿ ಕೊಡವರು- ಕೊಡವೇತರರು ಎಂಬ ಆಂತರಿಕ ಭಿನ್ನಾಭಿಪ್ರಾಯವೂ ಬಯಲಾಗಿದ್ದು, ನೂತನ ಅಧ್ಯಕ್ಷರ ನೇಮಕಾತಿ ನೆನೆಗುದಿಯಲ್ಲಿದೆ. ಮಿಟ್ಟು ಚಂಗಪ್ಪ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಘೋಷಣೆ ಮಾತ್ರ ಬಾಕಿ ಎಂದು ವರದಿಯಾಗಿ ಎರಡು ತಿಂಗಳು ಕಳೆದರೂ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.
ಇದೀಗ ಬಿಜೆಪಿಯಲ್ಲಿ ಈ ಪರಿಸ್ಥಿತಿ ಕಂಡುಬಂದಿದೆ. ಕೆಲವು ತಿಂಗಳ ಹಿಂದೆಯಷ್ಟೇ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡು ಪಕ್ಷವನ್ನು ಚುನಾವಣೆಗೆ ಸಂಘಟಿಸುತ್ತಿದ್ದ ಮನು ಮುತ್ತಪ್ಪ ಅವರು ಮಾರ್ಚ್ 7ರಂದು ಅಚ್ಚರಿಯ ರೀತಿಯಲ್ಲಿ ಪದಚ್ಯುತಿಗೊಂಡಿದ್ದಾರೆ. ಇವರ ಅಧ್ಯಕ್ಷ ಸ್ಥಾನಕ್ಕೆ ಪಕ್ಷದೊಳಗಿನ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆಂದು ಮುನಿಸು ಹೊಂದಿದ್ದ ಪಕ್ಷದ ಮುಖಂಡರ ಆಕ್ಷೇಪ ಶಾಸಕರ ಮೇಲಿನ ಅಸಮಾಧಾನ ಧಕ್ಕೆಯಾಗಿದೆ. ಯುವಕ ಬಿ. ಭಾರತೀಶ್ ಅವರನ್ನು ನೂತನ ಅಧ್ಯಕ್ಷರಾಗಿ ಪ್ರಕಟಿಸಲಾಗಿದೆಯಾದರೂ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಅಲ್ಲದೆ ಇವರು ಸೋಮವಾರಪೇಟೆ ತಾಲೂಕಿನಿಂದಲೂ ಹೊರಬಂದಿಲ್ಲ.
ಇದೀಗ ಜೆಡಿಎಸ್ ಈ ಸರದಿಯಲ್ಲಿದೆ. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಅತ್ಯುತ್ಸಾಹ ತೋರಿ ಪಕ್ಷ ಸಂಘಟನೆಗೆ ಮುಂದಾಗಿದ್ದ ಸಂಕೇತ್ ಪೂವಯ್ಯ ಅವರು ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ತಾವಾಗಿಯೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ. ಇವರು ಕೂಡ ಇತ್ತೀಚೆಗಷ್ಟೇ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದರು. ಇವರ ಆಯ್ಕೆಗೆ ಮುನ್ನ ಜಿಲ್ಲಾಧ್ಯಕ್ಷರಾಗಿದ್ದ ಎಸ್.ಬಿ. ಭರತ್ ಕುಮಾರ್ ಬಣ ಆರಂಭದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದು, ಇತ್ತೀಚಿನ ಕೆಲ ದಿನಗಳಿಂದ ವೀರಾಜಪೇಟೆ ತಾಲೂಕಿನ ಜೆಡಿಎಸ್ ಮುಖಂಡರು ಭಿನ್ನನಡೆ ತೋರಿದ್ದರು. ಈ ಬೆಳವಣಿಗೆಯಿಂದಾಗಿ ಸಂಕೇತ್ ಪೂವಯ್ಯ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ. ಈ ಪಕ್ಷದ ಇಬ್ಬರು ಪ್ರಮುಖ ಮುಖಂಡರಾದ ಯಂ.ಸಿ. ನಾಣಯ್ಯ ಹಾಗೂ ಬಿ.ಎ. ಜೀವಿಜಯ ಅವರುಗಳ ನಡುವೆ ಉತ್ತಮ ಸಂಬಂಧ ಇಲ್ಲ ಎಂಬ ಮಾತು ಕೇಳಿ ಬಂದಿದ್ದು, ಇಬ್ಬರೂ ಮೌನದಲ್ಲಿದ್ದಾರೆ.
ಮುಂದಿನ ವರ್ಷದ ಏಪ್ರಿಲ್ - ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು, ಸಹಜವಾಗಿ ಎಲ್ಲಾ ಪಕ್ಷಗಳು ಇದಕ್ಕೆ ತಯಾರಿ ನಡೆಸುತ್ತಿವೆ. ಈ ಸಂದರ್ಭದಲ್ಲಿ ಪಕ್ಷದಲ್ಲಿ ಕಂಡು ಬಂದಿರುವ ಈ ಅಸ್ಥಿರತೆಯಿಂದಾಗಿ ಕಾರ್ಯಕರ್ತರು ಗೊಂದಲಕ್ಕೊಳಗಾಗುವಂತಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಸರಿದಾರಿಯಲ್ಲಿ ನಡೆಯಲು ಆಡಳಿತ ಪಕ್ಷವೂಬೇಕು, ವಿರೋಧ ಪಕ್ಷವೂಬೇಕು.
ಸೂಕ್ಷ್ಮ ಪರಿಸರ ತಾಣದಂತಹ ಗಂಭೀರ ವಿಚಾರವೂ ಸೇರಿದಂತೆ ಕೊಡಗಿನಲ್ಲಿ ನೂರಾರು ಸಮಸ್ಯೆಗಳಿವೆ. ಇವೆಲ್ಲಕ್ಕೂ ಪರಿಹಾರ ಕಂಡುಕೊಳ್ಳಲು ರಾಜಕೀಯ ಪಕ್ಷಗಳು, ಪ್ರಮುಖ ನಾಯಕರು ಅತ್ಯಗತ್ಯ. ಆದರೆ ಈಗಿನ ಸನ್ನಿವೇಶ ದಲ್ಲಿ ಇತರ ಸಮಸ್ಯೆಗಳಿಗಿಂತ ಪಕ್ಷ ಕಟ್ಟುವ ಸಮಸ್ಯೆ ಎಡರು - ತೊಡರು ನಿವಾರಣೆಯೇ ಅನಿವಾರ್ಯ ಎಂಬ ಸ್ಥಿತಿಯಲ್ಲಿ ರಾಜಕೀಯ ಪಕ್ಷಗಳಿದ್ದು, ಮುಂದೇನಾಗಬಹುದು ಎಂದು ಕಾದುನೋಡಬೇಕಿದೆ.