ಸೋಮವಾರಪೇಟೆ, ಮಾ. 15: ಕೂಡಿಗೆ ಸಮೀಪದ ಹಳೆಕೋಟೆ ಗ್ರಾಮದಲ್ಲಿ ದಲಿತರ ಕೃಷಿ ಭೂಮಿಯನ್ನು ಕಿತ್ತುಕೊಂಡಿರುವ ಕಂದಾಯ ಇಲಾಖೆ ಪೊಲೀಸ್ ತರಬೇತಿ ಕೇಂದ್ರಕ್ಕೆ ನೀಡುವ ಹುನ್ನಾರ ಮಾಡಿದೆ ಎಂದು ದಲಿತ ಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪರಿಶಿಷ್ಟ ಜಾತಿ ಮತ್ತು ವರ್ಗದ ಹಿತರಕ್ಷಣಾ ಸಮಿತಿಯ ಸಭೆ ತಹಶೀಲ್ದಾರ್ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ ಅವರು, ಹಳೆಕೋಟೆ ಗ್ರಾಮದಲ್ಲಿ ಸುಮಾರು 65 ದಲಿತ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಕೃಷಿ ಕಾರ್ಯಕೈಗೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು, ದಲಿತರ ಭೂಮಿಯನ್ನು ಕಿತ್ತು ಪೊಲೀಸ್ ಇಲಾಖೆಗೆ ನೀಡಲು ಮುಂದಾಗಿದ್ದಾರೆ. ಇದು ಖಂಡನೀಯ ಎಂದರು.
ದಲಿತರನ್ನು ಒಕ್ಕಲೆಬ್ಬಿಸಿ ಜಾಗವನ್ನು ಕಿತ್ತುಕೊಳ್ಳಲು ಜಿಲ್ಲಾಡಳಿತ ಪ್ರಯತ್ನಿಸಿದರೆ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಜಿಲ್ಲಾಡಳಿತ ನೀಡಿದ ಜಾಗದಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆಯಾಗಲಿದೆ. ಇದೇ ಜಾಗ ಬೇಕು ಎಂದು ಪಟ್ಟು ಹಿಡಿಯುವದಿಲ್ಲ ಎಂದು ಡಿವೈಎಸ್‍ಪಿ ಸಂಪತ್ ಕುಮಾರ್ ಹೇಳಿದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಜಿಲ್ಲಾಧಿಕಾರಿಗಳು ರದ್ದುಪಡಿಸುವಂತೆ ಒತ್ತಾಯಿಸಲು ಸಭೆ ನಿರ್ಣಯಿಸಿತು.
ಕಣಿವೆ ಸಮೀಪದ ಹುಲುಸೆ, ಹಕ್ಕೆ, ಭುವನಗಿರಿ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೆ ದಲಿತರು ಶವಗಳನ್ನು ಕಾವೇರಿ ನದಿಗೆ ಎಸೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂತು. ಈ ಬಗ್ಗೆ ಚರ್ಚೆ ನಡೆದು ರಾಮಪುರ ಸುತ್ತುಮುತ್ತ 50 ಸೆಂಟ್ ಸರ್ಕಾರಿ ಜಾಗವನ್ನು ಸ್ಮಶಾನಕ್ಕೆ ಗುರುತಿಸುವಂತೆ ಕುಶಾಲನಗರ ಕಂದಾಯ ನಿರೀಕ್ಷಕರಿಗೆ ತಹಸೀಲ್ದಾರರು ಸೂಚಿಸಿದರು.
ಶನಿವಾರಸಂತೆ ಸಮೀಪದ ಹೆಬ್ಬುಲುಸೆ, ಬೆಳ್ಳಾರಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕು ಎಂದು ಎಚ್.ಬಿ. ಜಯಮ್ಮ ಹೇಳಿದರು. ದೊಡ್ಡಕೊಡ್ಲಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ ಎಂದು ಜಗದೀಶ್ ಹೇಳಿದರು. ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವದು ಎಂದು ತಹಸೀಲ್ದಾರ್ ಭರವಸೆ ನೀಡಿದರು.
8 ವರ್ಷಗಳು ಕಳೆದರೂ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿಲ್ಲ. ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯವೆ ಕಾರಣ ಎಂದು ಸುರೇಶ್ ಹಾಗೂ ಎಂ.ಪಿ. ಹೊನ್ನಪ್ಪ ಹೇಳಿದರು.
ಸರ್ಕಾರದಿಂದ ಅಂಬೇಡ್ಕರ್ ಭವನಕ್ಕೆ ಒಂದು ತಿಂಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ಟೆಂಡರ್ ಪ್ರಕ್ರಿಯೆ ನಂತರ ಕಾಮಗಾರಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ, ಇಂಜಿನಿಯರ್ ವೀರೇಂದ್ರ ಸಭೆಗೆ ಭರವಸೆ ನೀಡಿದರು.
ಸಭೆಯಲ್ಲಿ ಹಿತರಕ್ಷಣಾ ಸಮಿತಿಯ ಸದಸ್ಯರಾದ ಬಿ.ಇ. ಜಯೇಂದ್ರ, ಜಯಪ್ಪ ಹಾನಗಲ್, ಎಂ.ಎನ್. ರಾಜಪ್ಪ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.