ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಅವಘಡ
ಅಲಹಾಬಾದ್, ಮಾ. 15: ಭಾರತೀಯ ವಾಯುಪಡೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ಅಲಹಾಬಾದ್ ಸಮೀಪ ತುರ್ತು ಭೂಸ್ಪರ್ಶ ಮಾಡುವ ವೇಳೆ ಮಗುಚಿ ಬಿದ್ದಿದ್ದು, ಅದೃಷ್ಟ ವಶಾತ್ ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತರ ಪ್ರದೇಶದ ಅಲಹಾಬಾದ್ನ ಬಾಮ್ರೋಲಿ ಎಂಬ ಪ್ರದೇಶಲ್ಲಿ ತರಬೇತಿ ಕಾರ್ಯದಲ್ಲಿ ನಿರತವಾಗಿದ್ದ ವೇಳೆ ಚೇತಕ್ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ತುರ್ತಾಗಿ ಭೂಸ್ಪರ್ಶ ಮಾಡಬೇಕಾಯಿತು. ಈ ವೇಳೆ ಹೆಲಿಕಾಪ್ಟರ್ ಮಗುಚಿ ಬಿದ್ದಿದ್ದು, ಹೆಲಿಕಾಪ್ಟರ್ನಲ್ಲಿದ್ದ ಇಬ್ಬರೂ ಪೈಲಟ್ಗಳು ಆಶ್ಚರ್ಯಕರ ರೀತಿಯಲ್ಲಿ ಸುರಕ್ಷಿತವಾಗಿ ಪಾರಾಗಿದ್ದಾರೆ. ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಾಗ ಪೈಲಟ್ಗಳು ಅದನ್ನು ತುರ್ತಾಗಿ ಕೆಳಗಿಳಿಸಲು ಯತ್ನಿಸಿದರು. ಆಗ ಹೆಲಿಕಾಪ್ಟರ್ ಬುಡ ಮೇಲಾಗಿ ನೆಲಕ್ಕುರುಳಿತು. ಪ್ರಕರಣ ಸಂಬಂಧ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಹಿರಿಯ ಅಧಿಕಾರಿಗಳಿಗೆ ತನಿಖಾ ಜವಾಬ್ದಾರಿ ನೀಡಲಾಗಿದೆ.
ಸೇನಾ ಪಡೆಯಿಂದ ಇಬ್ಬರು ಉಗ್ರರ ಹತ್ಯೆ
ಶ್ರೀನಗರ, ಮಾ. 15: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಅಡಗಿ ಕುಳಿತು ಧಾಳಿ ನಡೆಸುತ್ತಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನಾ ಪಡೆ ಬುಧವಾರ ಹೊಡೆದುರುಳಿಸಿದೆ. ಕುಪ್ವಾಲದ ಕಲರೂಸ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವದಾಗಿ ಮಾಹಿತಿ ತಿಳಿದುಬಂದಿತ್ತು. ಕೂಡಲೇ 41 ರಜ್ಪುತನ ರೈಫಲ್ಸ್, ಸಿಆರ್’ಪಿಎಫ್ 98 ಬೆಟಾಲಿಯನ್ ಮತ್ತು ಕುಪ್ವಾರದ ವಿಶೇಷ ಪೆÇಲೀಸ್ ಪಡೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಉಗ್ರರು ಸೇನಾ ಪಡೆ ಮೇಲೆ ಏಕಾಏಕಿ ಗುಂಡಿನ ಧಾಳಿ ನಡೆಸಿದ್ದರು. ಧಾಳಿ ವೇಳೆ ಓರ್ವ ಪೆÇಲೀಸ್ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಮೂವರು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿತ್ತು. ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಸೇನಾ ಪಡೆ ಸುತ್ತುವರೆದಿದ್ದು, ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ. ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ರಾಷ್ಟ್ರಪತಿ ಹುದ್ದೆಗೆ ಆಡ್ವಾಣಿ ಹೆಸರು ಸೂಚಿಸಿದ ಮೋದಿ
ನವದೆಹಲಿ, ಮಾ. 15: ಮುಂದಿನ ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ. ಗುಜರಾತ್ನ ಸೋಮನಾಥದಲ್ಲಿ ನಡೆದ ಬಿಜೆಪಿ ವರಿಷ್ಠರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಖುದ್ದಾಗಿ ಆಡ್ವಾಣಿ ಅವರ ಹೆಸರನ್ನು ಪ್ರಸ್ತಾವಿಸಿದ್ದು, ಇದರೊಂದಿಗೆ ಆಡ್ವಾಣಿ ಅವರಿಗೆ ರಾಷ್ಟ್ರಪತಿ ಹುದ್ದೆಯನ್ನು ಗುರುದಕ್ಷಿಣೆಯಾಗಿ ನೀಡಲಿದ್ದಾರೆ. ಬಿಜೆಪಿ ವರಿಷ್ಠರ ಸಭೆಯಲ್ಲಿ ಅಮಿತ್ ಶಾ, ಕೇಶುಭಾಯಿ ಪಟೇಲ್ ಮತ್ತು ಎಲ್.ಕೆ. ಆಡ್ವಾಣಿ ಅವರು ಉಪಸ್ಥಿತರಿದ್ದರು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಪ್ರಚಂಡ ಗೆಲುವು ತನ್ನ ಆಯ್ಕೆಯ ಅಭ್ಯರ್ಥಿಯನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡುವ ಅವಕಾಶ ಬಿಜೆಪಿಗೆ ಒದಗಿದೆ.
ಮಣಿಪುರ ಸಿಎಂ ಆಗಿ ಬಿರೇನ್ ಸಿಂಗ್ ಪ್ರಮಾಣ ವಚನ
ಇಂಫಾಲ, ಮಾ. 15: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಎನ್. ಬಿರೇನ್ ಸಿಂಗ್ ಅವರು ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಂಫಾಲದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಿರೇನ್ ಅವರೊಂದಿಗೆ ಇತರ ಇಬ್ಬರ ಚುನಾಯಿತ ಸದಸ್ಯರಾದ ವಿಶ್ವಜೀತ್ ಸಿಂಗ್ ಮತ್ತು ಜೋಯ್ ಕುಮಾರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಜೋಯ್ ಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಮಣಿಪುರ ರಾಜ್ಯಪಾಲ ನಜ್ಮಾ ಹೆಫ್ತುಲ್ಲಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸಣ್ಣ ಪಕ್ಷಗಳ ಸಹಾಯದೊಂದಿಗೆ ಮಣಿಪುರದಲ್ಲಿ ಬಿಜೆಪಿ ಅಧಿಕಾರ ನಡೆಸಲಿದೆ. 21 ಶಾಸಕರನ್ನು ಹೊಂದಿರುವ ಬಿಜೆಪಿಗೆ ನಾಗಾ ಪೀಪಲ್ಸ್ ಪಾರ್ಟಿ ಮ್ತತು ಲೋಕ ಜನಶಕ್ತಿ ಪಕ್ಷಗಳು ಬೆಂಬಲ ನೀಡಿತ್ತು. ನಿನ್ನೆಯಷ್ಟೇ ರಾಜ್ಯಪಾಲ ನಜ್ಮಾ ಹೆಫ್ತುಲ್ಲಾ ಅವರು ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು. ಇದರಂತೆ ಇಂದು ಬಿರೇನ್ ಅವರು ಮಣಿಪುರ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದು ಈ ಮೂಲಕ ಮಣಿಪುರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಂತಾಗಿದೆ.
ನಹೀದ್ ಅಫ್ರಿನ್ ವಿರುದ್ಧ ಮೌಲ್ವಿಗಳಿಂದ ಫತ್ವಾ
ಅಸ್ಸಾಂ, ಮಾ. 15: ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಹಾಡುಗಳನ್ನು ಹಾಡುತ್ತಿದ್ದ 16 ವರ್ಷದ ಹರೆಯದ ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್ ವಿರುದ್ಧ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. 2015ರಲ್ಲಿ ನಡೆಸಿದ್ದ ರಿಯಾಲಿಟಿ ಶೋನಲ್ಲಿ ಅಫ್ರಿನ್ ಮೊದಲ ರನ್ನರ್ ಅಪ್ ಆಗಿದ್ದರು. ಇಸಿಸ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಉಗ್ರವಾದದ ವಿರುದ್ಧದ ಗೀತೆಗಳನ್ನು ನಹೀದ್ ಅಫ್ರಿನ್ ಅವರು ಇತ್ತೀಚೆಗೆ ಹಾಡಿದ್ದರು. ಈ ಹಿನ್ನೆಲೆಯಲ್ಲಿ ಅಫ್ರಿನ್ ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡದಂತೆ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. ಅಸ್ಸಾಂನ ಉದಲಿ ಸೋನಾಯ್ ಬೀಬಿ ಕಾಲೇಜಿನಲ್ಲಿ ತಾ. 25 ರಂದು ಅಫ್ರನ್ ಗಾಯನ ಕಾರ್ಯಕ್ರಮ ನಿಗದಿಯಾಗಿತ್ತು. ಮಸೀದಿ, ಈದ್ಗಾ, ಮದರಸಾಗಳು ಹತ್ತಿರುವಿರುವ ಪ್ರದೇಶದಲ್ಲಿ ರಾತ್ರಿಯಿಡೀ ಸಂಗೀತ ಕಾರ್ಯಕ್ರಮ ನಡೆಸುವದು ಶರಿಯಾಗೆ ವಿರುದ್ಧವಾದುದು. ಇದರಿಂದ ನಮ್ಮ ಮುಂದಿನ ಪೀಳಿಗೆ ಹೊರಗಿನ ಆಕರ್ಷಣೆಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಒಂದು ವೇಳೆ ಕಾರ್ಯಕ್ರಮ ನಡೆಸಿದ್ದೇ ಆದರೆ, ಮುಂದಿನ ತಲೆಮಾರು ಅಲ್ಲಾಹುವಿನ ಸಿಟ್ಟಿಗೆ ಗುರಿಯಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.
ಕಟ್ಟಡ ಕುಸಿದು 24 ಮಂದಿ ಸಿಲುಕಿರುವ ಸಾಧ್ಯತೆ
ಕಾನ್ಪುರ, ಮಾ. 15: ಕಾನ್ಪುರ ಜಿಲ್ಲೆಯಲ್ಲಿ ಬುಧವಾರ ಶೀಥಲಿಕರಣ ಘಟಕದ ಕಟ್ಟಡ ಕುಸಿದು ಬಿದ್ದಿದ್ದು, ಕಟ್ಟಡದ ಅವಶೇಷಗಳಡಿ ಕನಿಷ್ಟ 24 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಹಲವು ರೈತರು ತಾವು ಬೆಳೆದ ಆಲುಗಡ್ಡೆಯನ್ನು ಶಿವರಾಜ್ಪುರದಲ್ಲಿರುವ ಶೀಥಲಿಕರಣ ಘಟಕದಲ್ಲಿ ಶೇಖರಿಸಿಡಲು ತೆರಳಿದ್ದ ವೇಳೆಯೇ ಈ ಘಟನೆ ನಡೆದಿದೆ. ಚಿಲ್ಲರ್ ಪ್ಲಾಂಟ್ನಲ್ಲಿದ್ದ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಿಂದ ಈಗಾಗಲೇ ಐವರು ರೈತರು ಹಾಗೂ ಏಳು ಸಿಬ್ಬಂದಿ ಸೇರಿದಂತೆ 12 ಮಂದಿಯನ್ನು ರಕ್ಷಿಸಲಾಗಿದ್ದು, ಕೋಲ್ಡ್ ಸ್ಟೋರೇಜ್ ಮಾಲೀಕ, ಆತನ ಪುತ್ರ ಹಾಗೂ ಕಾರ್ಮಿಕರು ಸೇರಿದಂತೆ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ ಎಂದು ಪೆÇಲೀಸರು ಹೇಳಿದ್ದಾರೆ.