ಗೋಣಿಕೊಪ್ಪಲು, ಮಾ. 15: ವೀರಾಜಪೇಟೆ ತಾಲೂಕು ಅಕ್ರಮ-ಸಕ್ರಮ ಸಭೆ ಕ್ಷೇತ್ರ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯದೆ 4 ತಿಂಗಳಾಗುತ್ತಾ ಬಂದಿದೆ. ಕಳೆದ 40ಕ್ಕೂ ಅಧಿಕ ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಅನುಭವ ಸ್ವಾಧೀನದೊಂದಿಗೆ ಕೃಷಿ ಮಾಡುತ್ತಾ ಬಂದಿರುವ ಸಣ್ಣ ಹಿಡುವಳಿದಾರರಿಗೆ ಇನ್ನೂ ನ್ಯಾಯ ಸಿಕ್ಕಿರುವದಿಲ್ಲ. ಇಲ್ಲಿನ ಬಡ ದುರ್ಬ¯ ವರ್ಗಗಳಿಗೆ ಹಕ್ಕುಪತ್ರ, ಸಾಗುವಳಿ ಪತ್ರ ಸಿಗದೆ ತೀವ್ರ ಅನ್ಯಾಯವಾಗಿದೆ ಈ ಹಿನ್ನೆಲೆಯಲ್ಲಿ ಸದಸ್ಯತನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವದಾಗಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಕೊಲ್ಲೀರ ಬೋಪಣ್ಣ ತಿಳಿಸಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಮಾಧ್ಯಮದೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಸುಮಾರು 15 ವರ್ಷ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿದ್ದರೆ ಅಂತಹ ಅರ್ಹ ಫಲಾನುಭವಿಗಳಿಗೆ ಯಾವದೇ ಸ್ವಂತ ಜಾಗವಿಲ್ಲದಿದ್ದಲ್ಲಿ ಒಟ್ಟು 5 ಎಕರೆವರೆಗೂ ಅಕ್ರಮ ಸಕ್ರಮಗೊಳಿಸಿ ಹಕ್ಕು ಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಸಮಿತಿಯ ಸದಸ್ಯನಾಗಿ ಸಣ್ಣ ಹಿಡುವಳಿದಾರರಿಗೆ, ಬಡ ದುರ್ಬಲ ವರ್ಗದವರಿಗೆ ಯಾವದೇ ಕೆಲಸ ಕಂದಾಯ ಇಲಾಖೆಯಿಂದ ಆಗಿರುವದಿಲ್ಲ. ಸಕ್ರಮಕ್ಕಾಗಿ ಸುಮಾರು 500ಕ್ಕೂ ಅಧಿಕ ಸಣ್ಣ ಹಿಡುವಳಿದಾರರು ನಿಯಮದಂತೆ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಅನ್ಯಾಯವಾಗಿದೆ. ಅರ್ಜಿದಾರರು ಇದರಿಂದಾಗಿ ತಮ್ಮ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳಲು ತೊಂದರೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಸಣ್ಣ ಹಿಡುವಳಿದಾರರು ಹಾಗೂ ಅರ್ಜಿ ಸಲ್ಲಿಸಿ ನ್ಯಾಯ ಸಿಗದ ದುರ್ಬಲ ವರ್ಗದ ಪರವಾಗಿ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರ ಬಳಿ ನಿಯೋಗ ತೆರಳಿ ಕಾರ್ಯಕ್ರಮ ಅನುಷ್ಠಾನಕ್ಕೆ ಮನವಿ ಮಾಡಲಾಗುವದು ಎಂದು ಹೇಳಿದರು.
ಬಜೆಟ್ ನಂತರ ಸಭೆ - ಮಹದೇವಸ್ವಾಮಿ
ಅಕ್ರಮ ಸಕ್ರಮ ಸಭೆ ವಿಳಂಬದ ಬಗ್ಗೆ ತಹಶೀಲ್ದಾರ್ ಮಹದೇವಸ್ವಾಮಿ ಅವರ ಗಮನ ಸೆಳೆದಾಗ ಇದೀಗ ವಿಧಾನ ಸಭಾ ಕಲಾಪ ನಡೆಯುತ್ತಿದ್ದು, ತಿಂಗಳ ಅಂತ್ಯದೊಳಗೆ ಬಜೆಟ್ ಮಂಡನೆ ಆಗಲಿದೆ. ಏಪ್ರಿಲ್ ಮೊದಲ ವಾರದಲ್ಲಿ ಸಭೆ ಕರೆಯಲು ಸಮಿತಿಯ ಅಧ್ಯಕ್ಷ ಶಾಸಕ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ. ಅಕ್ರಮ ಸಕ್ರಮ ಅರ್ಹ ಫಲಾನುಭವಿಗಳಿಗೆ ಯಾವದೇ ತೊಂದರೆಯಾಗುವದಿಲ್ಲ.
ಬಜೆಟ್ ಮಂಡನೆ ನಂತರ ತುರ್ತಾಗಿ ಅಕ್ರಮ ಸಕ್ರಮ ಸಮಿತಿ ಸಭೆ ಕರೆಯಲಾಗುವದು ಎಂದು ಮಾಹಿತಿ ನೀಡಿದ್ದಾರೆ. ಈ ಹಿಂದೆ ನಿಯಮದಂತೆ ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇಲೆ ಅಕ್ರಮ ಸಕ್ರಮ ಕಾನೂನು ಅನ್ವಯವಾಗಲಿದೆ ಎಂದು ಹೇಳಿದರು.