ಮಡಿಕೇರಿ, ಮಾ. 14: ಮಡಿಕೇರಿ ನಗರ ವ್ಯಾಪ್ತಿಯಲ್ಲಿರುವ ನೀರಿನ ಮೂಲಗಳ ರಕ್ಷಣೆಗೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದ್ದು, ಕೆರೆ ಅಭಿವೃದ್ಧಿಗೆ ಬಜೆಟ್ನಲ್ಲಿ ಹಣ ಮೀಸಲಿಡುವದ ರೊಂದಿಗೆ ಕೆರೆ ಒತ್ತುವರಿ ಮಾಡಿಕೊಂಡಿರುವವರ ಮೇಲೆ ಕಾರ್ಯ ಕೈಗೊಳ್ಳಲು ತೀರ್ಮಾನಿಸಿದೆ.ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಚುಮ್ಮಿದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರುಗಳು ಕೆರೆ ಒತ್ತುವರಿ ವಿಚಾರವನ್ನು ಪ್ರಸ್ತಾಪಿಸಿದರು. ಕನ್ನಂಡಬಾಣೆಯಲ್ಲಿ ಉತ್ತಮ ಜಲಮೂಲವಿರುವ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮಣ್ಣು ಸುರಿದು ಮುಚ್ಚಲಾಗಿದೆ. ಈ ಬಗ್ಗೆ ಗಮನಕ್ಕೆ ಬರಲಿಲ್ಲವೇ ಎಂದು ಮುಡಾ ಆಯುಕ್ತರನ್ನು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಬೇಕೆಂದು ಸೂಚಿಸಿದರು.
ಅಲ್ಲದೆ ಕನ್ನಂಡಬಾಣೆ, ಪಂಪಿನಕರೆ, ರೋಷನಾರಗಳಲ್ಲಿರುವ ಜಲಮೂಲವಿರುವ ಜಾಗಕ್ಕೆ ನಗರಸಭೆ ಅಥವಾ ಮುಡಾದಲ್ಲಿ ಖಾತೆಯಾಗಿ ದೆಯೇ ಎಂದು ಪರಿಶೀಲಿಸಿ, ಖಾತೆ ಯಾಗದಿದ್ದಲ್ಲಿ ಖಾತೆ ಮಾಡಿಸುವಂತೆ ಆಯುಕ್ತರಿಗೆ ಸೂಚಿಸಿದರು.
ಖಾತೆ ವರ್ಗಾವಣೆ: ಕಂದಾಯ ಇಲಾಖೆಯಲ್ಲಿ ಜಮ್ಮಾ ಜಾಗಗಳಿಗೆ ಕಂದಾಯ ನಿಗದಿಯಾಗದೆ ಹಾಗೇ ಉಳಿದಿರುವಾಗ ಕನ್ನಂಡಬಾಣೆಯಲ್ಲಿ ರುವ ಜಮ್ಮಾ ಜಾಗಗಳು ತ್ವರಿತವಾಗಿ ಖಾತೆ ವರ್ಗಾವಣೆಯಾಗುತ್ತಿರುವ ಬಗ್ಗೆ ಶಾಸಕ ಬೋಪಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಕೆರೆ ಒತ್ತುವರಿ ಜಾಗಕ್ಕೂ ಖಾತೆಯಾಗಿದ್ದು, ಇದು ಹೇಗೆ ಸಾಧ್ಯ. ಖಾತೆ ವರ್ಗಾವಣೆ ಮಾಡುವಾಗ ಪರಿಶೀಲನೆ ಮಾಡಿಲ್ಲವೇ ಎಂದು ಆಯುಕ್ತರನ್ನು ಪ್ರಶ್ನಿಸಿದರು. ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.
ಬಡಾವಣೆ ಮೇಲೆ ಕಣ್ಣು: ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಬಡಾವಣೆ ಗಳಿದ್ದು, ಕೆಲವು ಮಾತ್ರ ನಗರಸಭೆ ಹಾಗೂ ಮುಡಾದಲ್ಲಿ ಖಾತೆಯಾಗಿವೆ. ಈ ಬಗ್ಗೆ ಮುಡಾ ಹಾಗೂ ನಗರಸಭೆ ಆಯುಕ್ತರುಗಳು ಜಂಟಿಯಾಗಿ ಪರಿಶೀಲನೆ ಮಾಡಿ ಖಾತೆಯಾಗದ ಬಡಾವಣೆಗಳ ಮಾಲೀಕರ ಮೇಲೆ ಕ್ರಮಕೈಗೊಳ್ಳ ಬೇಕೆಂದು ಸಭೆ ತೀರ್ಮಾನಿಸಿತು.
ಅಲ್ಲದೆ ಬಡಾವಣೆಗಳಲ್ಲಿ ಉದ್ಯಾನ ಹಾಗೂ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆಯೇ ಎಂಬದನ್ನು ಪರಿಶೀಲಿಸುವದು, ಅಂತಹ ಜಾಗಗಳನ್ನು ಖಾತೆ ಮಾಡಿಸುವ ಬಗ್ಗೆ ಆಯುಕ್ತರಿಗೆ ಸೂಚಿಸಲಾಯಿತು. ಬಡಾವಣೆಗಳ ನಿರ್ಮಾಣ ಸಂದರ್ಭ ಒತ್ತುವರಿ ಆಗಿರುವ ಬಗ್ಗೆ, ಮೂಲಭೂತ ಸೌಲಭ್ಯ ಒದಗಿಸಿರುವ ಬಗ್ಗೆಯೂ ಪರಿಶೀಲಿಸು ವಂತೆ ತೀರ್ಮಾನಿಸಲಾಯಿತು. ಮುಂದಿನ 10 ದಿನಗಳಲ್ಲಿ ಪರಿಶೀಲಿಸಿ ಕ್ರಮಕ್ಕೆ ಮುಂದಾಗುವಂತೆ ಆಯುಕ್ತರಿಗೆ ಸೂಚಿಸಲಾಯಿತು.
ಕಟ್ಟಡಗಳ ನಿರ್ಮಾಣ ಸಂದರ್ಭ ಸೋಲಾರ್ ಹಾಗೂ ಮಳೆಕೊಯ್ಲು ಕಡ್ಡಾಯವಾಗಿ ಅಳವಡಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು.
ಉಳಿತಾಯ ಬಜೆಟ್
ಇದೇ ಸಂದರ್ಭ ಮುಡಾ ಅಧ್ಯಕ್ಷ ಚುಮ್ಮಿದೇವಯ್ಯ ಅವರು ರೂ. 2.69 ಕೋಟಿ ಉಳಿತಾಯ ಬಜೆಟ್ ಅನ್ನು ಮಂಡಿಸಿದರು.
ಮುಡಾದಲ್ಲಿ ಒಟ್ಟು 1,93,72,873 ರೂ.ಗಳ ಉಳಿತಾಯವಿದೆ. 1,56,93,409 ರೂ.ಗಳ ನಿರಖು ಠೇವಣಿಯಿದೆ. 2017-18ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ 86.40 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ 4,37,06,282 ರೂ.ಗಳ ಮುಂಗಡ ಪತ್ರವನ್ನು ಮಂಡಿಸಲಾಗಿದೆ. ಇದರಲ್ಲಿ 1,67,68,000 ರೂ.ಗಳು ವೆಚ್ಚವಾಗಿ 2,69,38,282 ರೂ. ಉಳಿತಾಯವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಪರಿಶೀಲನಾ ಶುಲ್ಕವಾಗಿ 25 ಲಕ್ಷ ರೂ., ಕೆಟಿಸಿಪಿ ಕಾಯ್ದೆ ಕಲಂ 18ರಲ್ಲಿ ಸಂಗ್ರಹಿಸಲಾಗುವ ಶುಲ್ಕ 20 ಲಕ್ಷ ರೂ., ಬ್ಯಾಂಕ್ಗಳಲ್ಲಿರುವ ಉಳಿತಾಯ ಖಾತೆಯ ಬಡ್ಡಿ 5 ಲಕ್ಷ ರೂ., ಟೆಂಡರ್ ಫಾರಂ ಹಾಗೂ ಟೆಂಡರ್ ಠೇವಣಿ ಶುಲ್ಕವಾಗಿ 5 ಲಕ್ಷ ರೂ., ಮಾಹಿತಿ ಹಕ್ಕು ಶುಲ್ಕದಿಂದ 5 ಸಾವಿರ ರೂ., ಟಿಡಿಎಸ್ ಪಾವತಿಯಿಂದ 1 ಲಕ್ಷ ರೂ., ಇಂಜಿನಿಯರ್ಗಳ ಪರವಾನಗಿ ಶುಲ್ಕ ನವೀಕರಣದಿಂದ 30 ಸಾವಿರ ರೂ. ಹಾಗೂ ಇತರ ಮೂಲದಿಂದ 5 ಸಾವಿರ ರೂ. ಸೇರಿದಂತೆ 86.40 ಲಕ್ಷ ರೂ.ಗಳ ಆದಾಯ ಅಂದಾಜಿಸಲಾಗಿದೆ.
ನಗರ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಇಕ್ಕಟ್ಟಾಗಿದ್ದು, ನೂತನ ಕಚೇರಿ ನಿರ್ಮಾಣಕ್ಕಾಗಿ ಮೊದಲ ಹಂತವಾಗಿ 5 ಲಕ್ಷ ರೂ.ಗಳನ್ನು ತೆಗೆದಿಡಲಾಗಿದೆ. ಪೀಠೋಪಕರಣ ಖರೀದಿಗೆ 50 ಸಾವಿರ ರೂ.ಗಳನ್ನು ವಿನಿಯೋಗಿಸಲು ನಿರ್ಧರಿಸಲಾಗಿದೆ. ನಗರದ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಾಸೀಟ್ ಉದ್ಯಾನವನದವರೆಗೆ ವಿದ್ಯುತ್ ಲ್ಯಾಂಪ್ಗಳನ್ನು ಅಳವಡಿಸಲು 10 ಲಕ್ಷ ರೂ., ಸಿಎ ಉದ್ಯಾನವನ ಬಯಲು ಪ್ರದೇಶವನ್ನು ಅಭಿವೃದ್ಧಿಪಡಿಸಲು 10 ಲಕ್ಷ ರೂ., ವೆಬ್ಸೈಟ್ ನವೀಕರಣ, ನಿರ್ವಹಣೆ ಹಾಗೂ ಕಚೇರಿ ಯಂತ್ರೋಪಕರಣ ಖರೀದಿಗೆ 1 ಲಕ್ಷ ರೂ.ಗಳನ್ನು ತೆಗೆದಿಡಲಾಗಿದೆ. ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕನ್ನಂಡಬಾಣೆ ಬ್ರಿಟಿಷ್ ಕೆರೆಯನ್ನು ಅಭಿವೃದ್ಧಿಪಡಿಸಲು 30 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಅವರು ಭಾಗವಹಿಸಿದ್ದರು.