ಮಡಿಕೇರಿ, ಮಾ. 15: ಪುರುಷ ಟೈಲರ್‍ಗಳು ಇಂದು ವೃತ್ತಿಯಿಂದ ವಿಮುಖರಾಗುತ್ತಿದ್ದು, ಮಹಿಳಾ ಟೈಲರ್‍ಗಳು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಟೈಲರಿಂಗ್ ವೃತ್ತಿ ಮೂಲಕ ಜೀವನ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಡಿಕೇರಿ ಕ್ಷೇತ್ರ ಸಮಿತಿಯ 8ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಟೈಲರ್‍ಗಳ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಹಲವು ಬಾರಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೂ ಸರ್ಕಾರವನ್ನು ಅವಲಂಭಿಸದೇ ನಾವು ಸಂಘಟಿತರಾಗಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅಸೋಸಿಯೇಷನ್‍ನ ರಾಜ್ಯ ಸಮಿತಿಯ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ ಮಾತನಾಡಿ ಸಮಿತಿಯ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಮುಂದೆಯೂ ಪ್ರಯತ್ನಿಸಲಾಗುವದು ಎಂದರು.
ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ, ನಗರಸಭೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಆದರೆ ಯಾರೂ ಕೂಡ ಸೌಲಭ್ಯಗಳನ್ನು ಪಡೆಯಲು ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು. ಸಮಿತಿಯ ವಾರ್ಷಿಕ ವರದಿಯನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫುನ್ನೀಸ, ಲೆಕ್ಕಪತ್ರ ಮಂಡನೆಯನ್ನು ಕೋಶಾಧಿಕಾರಿ ಸುಧಾಕರ್ ಮಂಡಿಸಿದರು. ಈ ಸಂದರ್ಭ ನಗರದ ಹಿಂದೂಸ್ಥಾನಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಹಿರಿಯ ಸದಸ್ಯ ಬಾಬಣ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್‍ನ ರಾಜ್ಯಾಧ್ಯಕ್ಷ ಬಿ. ವಸಂತ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ವಸಂತ್ ಕುಲಾಲ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಬಿ.ಎಸ್. ಆನಂದ, ಎ.ಕೆ. ಚಂದನ್ ಹಾಗೂ ಇನ್ನಿತರರು ಇದ್ದರು.
ಸಮಿತಿ ಸದಸ್ಯೆ ಪ್ರಪುಲ್ಲಾ ಪ್ರಾರ್ಥಿಸಿದರು.