ಮಡಿಕೇರಿ, ಮಾ. 15: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಷದ ಹಿಂದೆ ತಾವೇ ಪೊರಕೆ ಹಿಡಿದು ಬೀದಿಯಲ್ಲಿ ಕಸ ಗುಡಿಸುವ ಮೂಲಕ ಮಹಾತ್ಮಗಾಂಧಿ ಅವರ ಜನ್ಮ ದಿನವನ್ನು ‘ಭಾರತ ಸ್ವಚ್ಛತಾ’ ದಿನವನ್ನಾಗಿ ಸಾರ್ವತ್ರಿಕ ಆಚರಣೆಗೆ ಕರೆ ನೀಡಿರುವದು ಗೊತ್ತಿರುವ ಸಂಗತಿ. ಹಾಗೆಯೇ ಸ್ವಚ್ಛತೆಗೆ ನಾವು ಎಷ್ಟು ಗಮನ ಕೊಡಬೇಕು ಎನ್ನುವದಕ್ಕೆ ಅದೊಂದು ಅಭೂತಪೂರ್ವ ಆಂದೋಲನವೇ ಆಗಿದೆ.

(ಮೊದಲ ಪುಟದಿಂದ) ನಮ್ಮ ಸುಂದರ ಕೊಡಗಿನ ಮಂಜಿನ ನಗರಿ ಮಡಿಕೇರಿಯಲ್ಲಿ ದಿನನಿತ್ಯ ಮುಂಜಾನೆ ಬೀದಿ ಗುಡಿಸಿ ಸ್ವಚ್ಛ ಮಾಡುವ ನೌಕರರು, ಆರೇಳು ತಿಂಗಳಿನಿಂದ ಸಂಬಳವಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಲೆಕ್ಕಕ್ಕೆ ಬೆಂಗಳೂರಿನ ‘ಗ್ಲೋಬಲ್ ಏಜೆನ್ಸಿ’ ಮುಖಾಂತರ ಸುಮಾರು 42 ಮಂದಿ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನಗರಸಭೆಯ ಕೆಲಸಕ್ಕೆ ನಿಯೋಜಿಸಲಾಗಿದೆ.

ಈ ನೌಕರರ ವೇತನವಾಗಿ ಮಾಸಿಕ ಅಂದಾಜು ರೂ. 5 ಲಕ್ಷಕ್ಕೂ ಅಧಿಕ ಮೊತ್ತವನ್ನು ಪೌರಾಡಳಿತ ವ್ಯವಸ್ಥೆಯಿಂದ ವಿನಿಯೋಗಿಸ ಲಾಗುತ್ತಿದ್ದರೂ, ಬಡ ನೌಕರರು ಸಂಬಳ ಸಿಗದೆ ಮುಂಜಾನೆ ಎದುರಾಗುವ ಪುರಪಿತೃಗಳ ಬಳಿ ಕಣ್ಣೀರುಗರೆಯುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಹೊರ ಜಿಲ್ಲೆಗಳಿಂದ ಬೆಂಗಳೂರು ಸಂಸ್ಥೆಯನ್ನು ನಂಬಿ ಬಂದಿರುವ ಈ ಬಡ ನೌಕರರ ಕುಟುಂಬಗಳು ಸಂಬಳವಿಲ್ಲದೆ, ಆರೇಳು ತಿಂಗಳ ಪುಕ್ಕಟೆ ದುಡಿಮೆಯಿಂದ ಕಂಗಾಲಾಗಿದ್ದಾರೆ. ನೌಕರಿ ಬಿಟ್ಟು ತವರೂರಿಗೆ ತೆರಳಲು ಯೋಚಿಸುತ್ತಿದ್ದರೂ, ತಮ್ಮ ಇಷ್ಟು ತಿಂಗಳ ದುಡಿಮೆ ವ್ಯರ್ಥವಾಗುವದೇ ಎಂಬ ನೋವಿನಲ್ಲಿ ಕೊರಗುತ್ತಿದ್ದಾರೆ.

ಆರೇಳು ತಿಂಗಳ ಹಿಂದೆ ಅಲ್ಪಸ್ವಲ್ಪ ಹಣವಾದರೂ ಕೈಸೇರುತ್ತಿದ್ದುದಾಗಿಯೂ, ಇದೀಗ ಹಣ ಪಡೆಯಲಾಗುತ್ತಿಲ್ಲವೆಂದು ದೂರುತ್ತಿದ್ದಾರೆ.

ಕೆಲಸಕ್ಕೆ ಬರುತ್ತಿಲ್ಲ: ಸದ್ಯದ ಪರಿಸ್ಥಿತಿಯಲ್ಲಿ ವೇತನವಿಲ್ಲದೆ ಕಂಗಾಲಾಗಿರುವ ನೌಕರರು ಮನೆ ಬಾಡಿಗೆ, ವಿದ್ಯುತ್ ಬಿಲ್, ಇತ್ಯಾದಿ ಕೊಡಲಾರದೆ ಗಂಡಸರು ಊರು ಬಿಡಲು ಮುಂದಾಗಿದ್ದಾರೆ. ಕುಟುಂಬ ಸದಸ್ಯರು ದಿಕ್ಕು ಕಾಣದೆ, ದುಡಿದ ಇದುವರೆಗಿನ ಹಣ ಕೈಸೇರಿದರೂ ಸಾಕೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಅನೇಕ ನೌಕರರು ಈ ಬಳಲುವಿಕೆಯಿಂದ ಕೆಲಸಕ್ಕೂ ಬಾರದೆ, ನಗರಸಭೆಯ ಬೆರಳೆಣಿಕೆ ಯಷ್ಟು ಖಾಯಂ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರು ವದು ಕಂಡು ಬಂದಿದೆ.

ಅಧ್ಯಕ್ಷರ ಪ್ರತಿಕ್ರಿಯೆ

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಈ ಬೆಳವಣಿಗೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ ಬಡ ಕಾರ್ಮಿಕರನ್ನು ಯಾರ್ಯಾರೋ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದು, ಈಗ ಸಂಬಳ ನೀಡದೆ ಗೋಳಾಡುವಂತೆ ಮಾಡಿದ್ದಾರೆ ಎಂದು ಅಸಹಾಯಕತೆ ಹೊರಗೆಡವಿದ್ದಾರೆ.

ನಗರ ಸ್ವಚ್ಛತೆಯನ್ನು ಗುತ್ತಿಗೆ ಪಡೆದಿರುವವರು, ಮುಗ್ಧ ನೌಕರರನ್ನು ಸಂಬಳ-ಸವಲತ್ತು ನೀಡದೆ ವಂಚಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸರಕಾರ ಹಾಗೂ ಸಂಬಂಧಪಟ್ಟವರ ಗಮನ ಸೆಳೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವದಾಗಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನ ಸಂಸ್ಥೆ ಹೊಣೆ

ಮಡಿಕೇರಿ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 40ಕ್ಕೂ ಅಧಿಕ ಮಂದಿ ನೌಕರರು ಸಂಬಳವಿಲ್ಲದೆ ತೊಂದರೆ ಅನುಭವಿಸಲು ಬೆಂಗಳೂರಿನ ‘ಗ್ಲೋಬಲ್ ಏಜೆನ್ಸಿ’ ಹೊಣೆ ಎಂದು ಆಯುಕ್ತೆ ಶುಭ ಅವರು ಸ್ಪಷ್ಟೀಕರಣ ನೀಡಿದ್ದಾರೆ.

‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ನವೆಂಬರ್‍ಗೆ ‘ಗ್ಲೋಬಲ್ ಏಜೆನ್ಸಿ’ ಪಡೆದಿರುವ ಗುತ್ತಿಗೆಯ ಅವಧಿ ಮುಗಿದಿದ್ದು, ಆನಂತರದಲ್ಲಿ ಮರು ಪ್ರಕ್ರಿಯೆ ನಿರ್ವಹಿಸಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಅಲ್ಲದೆ ನೌಕರರಿಗೆ ದಿನಗೂಲಿ ಪಾವತಿಸಿದ ಬಳಿಕ ನಗರಸಭೆಗೆ ಸೂಕ್ತ ದಾಖಲಾತಿಗಳನ್ನು ಪೂರೈಸಿ, ವೇತನ ಹಣ ಹೊಂದಿಕೊಳ್ಳುವದು ಕ್ರಮ. ಆ ಬಗ್ಗೆಯೂ ದಾಖಲಾತಿಗಳನ್ನು ನೀಡದ ಪರಿಣಾಮ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಹಣ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ನೌಕರರನ್ನು ನಿಯೋಜಿಸಿರುವ ಸಂಸ್ಥೆ, ನಿಯಮಾನುಸಾರ ನೀಡಬೇಕಾದ ಸವಲತ್ತುಗಳನ್ನು ಕೂಡ ಕೆಲಸಗಾರರಿಗೆ ನೀಡದಿರುವ ಪರಿಣಾಮ, ಎಲ್ಲವನ್ನು ಗಣನೆಗೆ ತೆಗೆದುಕೊಂಡು ಹಣ ಪಾವತಿಗೆ ಕ್ರಮಕೈಗೊಳ್ಳುವದಾಗಿ ಸಮಾಜಾಯಿಷಿಕೆ ನೀಡಿದ್ದಾರೆ.

ಈ ವ್ಯವಸ್ಥೆ ಬಗ್ಗೆ ಸಾರ್ವಜನಿಕರ ಸಹಿತ ನಗರಸಭಾ ಸದಸ್ಯರು ತಿಳುವಳಿಕೆ ಹೊಂದಿರಲೆಂದು ತಾನು ಸ್ಪಷ್ಟನೆ ನೀಡುತ್ತಿರುವದಾಗಿಯೂ ಶುಭ ವಿವರಿಸಿದ್ದಾರೆ.