ಮಡಿಕೇರಿ, ಮಾ. 15: ನ್ಯಾಯಾಲಯದ ಆದೇಶದಂತೆ ಮಡಿಕೇರಿ ನಗರದಲ್ಲಿ ಕಸದ ತೊಟ್ಟಿ ಮುಕ್ತ ಪ್ರದೇಶವನ್ನಾಗಿ ಮಾಡುವ ಸಲುವಾಗಿ ನೂತನ ಆಯುಕ್ತರು ನಗರದಲ್ಲಿ ಅಳವಡಿಸಲಾಗಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಿದರು. ಬದಲಿಗೆ ಮನೆ ಮನೆಗೆ ಟ್ರ್ಯಾಕ್ಟರ್ ಸಂಚರಿಸಿ ಕಸ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಆದರೆ ಎಲ್ಲಾ ಕಡೆಗಳಿಗೆ ಸರಿಯಾದ ಸಮಯಕ್ಕೆ ಟ್ರ್ಯಾಕ್ಟರ್ ತೆರಳದ್ದರಿಂದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಕಸದ ರಾಶಿಗಳು ಕಂಡುಬರುತ್ತಿವೆ. ಇನ್ನು ಕೆಲವೆಡೆ ಪ್ರತಿನಿತ್ಯ ಸರಿಯಾದ ಸಮಯಕ್ಕೆ ಟ್ರ್ಯಾಕ್ಟರ್ ಬಂದರೂ ಟ್ರ್ಯಾಕ್ಟರ್ ತೆರಳಿದ ನಂತರ ಕಸವನ್ನು ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿರುವದು ಕಂಡುಬರುತ್ತಿದೆ.
ಸಂತ ಜೋಸೆಫರ ಶಾಲಾ ಬಳಿ ಕೆಲವು ಪ್ರತಿಷ್ಠಿತರ ಮನೆಗಳು, ಹೋಂಸ್ಟೇಗಳಿವೆ. ಇಲ್ಲಿನ ಕಸಗಳನ್ನು ರಾತ್ರಿ ವೇಳೆ ಇಲ್ಲವಾದಲ್ಲಿ ಟ್ರ್ಯಾಕ್ಟರ್ ತೆರಳಿದ ನಂತರ ತಂದು ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದೆ. ಹೋಂ ಸ್ಟೇಗಳ ತ್ಯಾಜ್ಯಗಳನ್ನು ನಾಯಿಗಳು, ದನಗಳು, ಎಳೆದಾಡಿ ರಸ್ತೆಯಲ್ಲೆಲ್ಲ ಹರಡಿ, ಅಸಹ್ಯ ವಾತಾವರಣ ಪ್ರತಿನಿತ್ಯ ಕಾಣಬಹುದಾಗಿದೆ.
ಇನ್ನೂ ಭಗವತಿ ನಗರದಲ್ಲೂ ಹಲವಾರು ಹೋಂ ಸ್ಟೇಗಳಿದ್ದು, ರಸ್ತೆ ಬದಿಯಲ್ಲಿ ‘ಇಲ್ಲಿ ಕಸ ಹಾಕಬಾರದು' ಎಂದು ನಗರಸಭೆ ಫಲಕ ಅಳವಡಿಸಿದ್ದರೂ ಅಲ್ಲಿಯೇ ಕಸಗಳನ್ನು ತಂದು ಸುರಿಯಲಾಗುತ್ತಿದೆ. ಇವರೂ ಕೂಡ ಪ್ರಜ್ಞಾವಂತರೇ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ‘ಕಸ'ದ ಬಗ್ಗೆ ನಗರಸಭೆಯ ಮುಂದಿನ ಕ್ರಮವೇನು ಎಂಬದು ತಿಳಿಯದಾಗಿದೆ.