ಮಡಿಕೇರಿ, ಮಾ. 14: ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಯಾವದೇ ಕಾರಣಕ್ಕೂ ದುಡಿಮೆಗೆ ದೂಡಬಾರದು ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೋಸೈಟಿ ವತಿಯಿಂದ ಎಸ್‍ಸಿಪಿ ಮತ್ತು ಟಿಎಸ್‍ಪಿ. ಯೋಜನೆಯಡಿ ‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ’, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಬೀದಿನಾಟಕ ಜನಜಾಗೃತಿ ಅಭಿಯಾನ ಹಾಗೂ ವಾರ್ತಾ ಇಲಾಖೆ ಮೂಲಕ ಹಮ್ಮಿಕೊಳ್ಳುವ ಹಲವು ಜನಪರ ಯೋಜನೆಗಳ ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಇದಕ್ಕಾಗಿ ಸರ್ಕಾರ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮನೆಯಿಂದ ಶಾಲೆಗೆ ಓಡಾಡುವವರಿಗೆ ವಿದ್ಯಾಸಿರಿ ಯೋಜನೆಯಡಿ ಸೌಲಭ್ಯವಿದೆ. ಇದನ್ನು ಪಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಮಾತನಾಡಿ, ಮಕ್ಕಳಿಗೆ ಬದುಕುವ ಅವಕಾಶ ಮತ್ತು ವಿಕಾಸ ಹೊಂದುವ ಹಾಗೂ ಪಾಲ್ಗೊಳ್ಳುವ ಹಕ್ಕು ಇದೆ. ಇದರ ಪ್ರಯೋಜನ ಪಡೆಯಬೇಕು. ಯಾವದೇ ಕಾರಣಕ್ಕೂ ದುಡಿಮೆಗೆ ಕಳುಹಿಸಬಾರದು ಎಂದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಅವರು ಮಾತನಾಡಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಬೀದಿನಾಟಕ ಮೂಲಕ ಜನಜಾಗೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.

18 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಕಳುಹಿಸಿದ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಇದಕ್ಕೆ ಕರೆ ಮಾಡಬಹುದಾಗಿದೆ. ಹಾಗೆಯೇ ಬಾಲಕಾರ್ಮಿಕ ಸಹಾಯವಾಣಿ ಕೇಂದ್ರ 080-22453549 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಇತರರು ಇದ್ದರು. ಬೀದಿನಾಟಕ ಮಡಿಕೇರಿ ತಾಲೂಕಿನ ಗಾಂಧಿನಗರ-ಮೂರ್ನಾಡು, ಕಾಂತೂರು-ಮೂರ್ನಾಡು, ಬೇತ್ರಿ, ನಾಪೋಕ್ಲು, ವಾಟೆಕಾಡು ಪೈಸಾರಿ ಹೊದ್ದೂರು, ತೊಂಭತ್ತುಮನೆ, ಹಾಕತ್ತೂರು ಹುಲಿತಾಳ. ವಿವೀರಾಜಪೇಟೆ ತಾಲೂಕಿನ ಪೆರಂಬಾಡಿ, ಬಾಳು ಗೋಡು, ಕರಡಿಗೋಡು, ಸಿದ್ದಾಪುರ, ಮಾಲ್ದಾರೆ, ಕಾರ್ಮಾಡು, ಕುಟ್ಟ, ಶ್ರೀಮಂಗಲ, ಸೋಮವಾರಪೇಟೆ ತಾಲೂಕಿನ ಹಳೆಕೂಡಿಗೆ, ನೆಲ್ಲಿಹುದಿಕೇರಿ, ಚೌಡ್ಲು, ಬಳಗುಂದ, ಗಣಗೂರು, ತ್ಯಾಗರಾಜ ಕಾಲೋನಿ, ಚಿಕ್ಕಅಳವಾರದಲ್ಲಿ ನಡೆಯಲ್ಲಿದೆ.

ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ಮಡಿಕೇರಿ ತಾಲೂಕಿನ ಯವಕಪಾಡಿ ಮತ್ತು ನಾಲಡಿ, ವೀರಾಜಪೇಟೆ ತಾಲೂಕಿನ ಚೆನ್ನಂಗಿ ಬಸವನಹಳ್ಳಿ, ದಿಡ್ಡಳ್ಳಿ, ಕಾರೆಹಡ್ಲು, ಚಿಕ್ಕರೇಷ್ಮೇ, ರೇಷ್ಮೇಹಡ್ಲು (ದೊಡ್ಡ ರೇಷ್ಮೆ), ಸೋಮವಾರಪೇಟೆ ತಾಲೂಕಿನ ಬಾಳೆಗಂದಿ, ತ್ಯಾಗತ್ತೂರು ಮತ್ತು ವಾಲ್ನೂರುನಲ್ಲಿ ನಡೆಯಲಿದೆ.