ಮಡಿಕೇರಿ, ಮಾ. 14: ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವದರಿಂದ ಮಳೆಗಾಗಿ ಶಿವನ ಮೊರೆ ಹೋಗಲು ನಿರ್ಧರಿಸಿರುವ ಮೂರ್ನಾಡಿನ ಧನ್ವಂತ್ರಿ ಯೋಗ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ತಾ. 20 ರಂದು ಬಲಮುರಿಯ ಶ್ರೀ ಕಣ್ವ ಮುನೀಶ್ವರ ದೇಗುಲದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರುದ್ರಾಭಿಷೇಕ ನಡೆಸಲು ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಮಹಾಬಲೇಶ್ವರ ಭಟ್, ರುದ್ರಾಭಿಷೇಕದ ಸಂದರ್ಭ ಸಾವಿರಕ್ಕೂ ಅಧಿಕ ರುದ್ರ ಪಠಣದೊಂದಿಗೆ ಮಳೆÉಗಾಗಿ ಶಿವನನ್ನು ಪ್ರಾರ್ಥಿಸಲಾಗುವದೆಂದರು.

ಕೊಡಗು ಜಿಲ್ಲೆ ಕರ್ನಾಟಕಕ್ಕೆ ಮಾತ್ರವಲ್ಲದೆ, ಇಡೀ ದೇಶಕ್ಕೆ ದೊಡ್ಡ ಸಂಪತ್ತಾಗಿದ್ದು, ಇಂತಹ ಮಹತ್ವದ ಜಿಲ್ಲೆಯಲ್ಲಿ ಬರ ಎದುರಾದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಕಾಫಿ, ಕಾಳುಮೆಣಸು ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಎದುರಾಗಿದೆ. ಕಾವೇರಿ ನದಿ ಬತ್ತುತ್ತಿದ್ದು, ಈ ದುಸ್ಥಿತಿ ಕೊಡಗು ಜಿಲ್ಲೆಗೆ ಬಂದಿರುವದು ದುರದೃಷ್ಟಕರವೆಂದು ಅವರು ಅಭಿಪ್ರಾಯಪಟ್ಟರು.

ಇದೇ ಕಾರಣಕ್ಕಾಗಿ ಕಣ್ವ ಮಹಾಮುನಿ ಪ್ರತಿಷ್ಠಾಪಿಸಿರುವ ಕಣ್ವ ಮುನೀಶ್ವರ ಕ್ಷೇತ್ರದಲ್ಲಿ ತಾ. 20 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರುದ್ರ ಪಠಣದೊಂದಿಗೆ ರುದ್ರಾಭಿಷೇಕ ನಡೆಯಲಿದೆ. ರುದ್ರಾಭಿಷೇಕದ ಸಂದರ್ಭ ಜಿಲ್ಲೆಯ ಎಲ್ಲಾ ಜಾತಿ ಜನಾಂಗ, ಪಕ್ಷ ಪಂಗಡದ ಸಮಸ್ತರು ಸೇರಿ ಮಳೆÉಗಾಗಿ ಪ್ರಾರ್ಥಿಸಬೇಕೆಂದು ಮನವಿ ಮಾಡಿದರು.

ಕನಿಷ್ಟ ಒಂದು ಬಟ್ಟಿ ಭತ್ತವನ್ನಾದರು ಬೆಳೆದು ಕನಿಷ್ಟ ಪ್ರಮಾಣದ ಅಕ್ಕಿಯನ್ನು ಜಿಲ್ಲೆಯ ಮಳೆ ದೈವವಾದ ಶ್ರೀ ಇಗ್ಗುತ್ತಪ್ಪನಿಗೆ ಅರ್ಪಿಸುವ ಮೂಲಕ ಬರವನ್ನು ನಿವಾರಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ಈ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ಜಿಲ್ಲೆಯಾದ್ಯಂತ ನಡೆಸಲಾಗುವದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಶ್ರೀ ಗಾಯತ್ರಿ ಚಾರಿಟೇಬಲ್ ಟ್ರಸ್ಟ್‍ನ ಶ್ರೀನಿವಾಸ್ ಗಿರಿ, ಪ್ರಮುಖರಾದ ಪ್ರಸಾದ್ ಭಟ್, ಮುರುಳಿ ಪ್ರಕಾಶ್ ಹಾಗೂ ಚಂದ್ರಶೇಖರ್ ಭಟ್ ಉಪಸ್ಥಿತರಿದ್ದರು.