ಆಯವ್ಯಯದಲ್ಲಿ ಹರಿಕಥೆ - ರಂಜನ್

ರಾಜ್ಯ ಸರ್ಕಾರ ಹಳೆಯ ವಿಚಾರಗಳನ್ನೇ ಸೇರಿಸಿಕೊಂಡು ಈ ಬಾರಿ ಬಜೆಟ್ ಮಂಡಿಸಿದ್ದು, ಬಿಜೆಪಿ ಅಧಿಕಾರಾವಧಿಯಲ್ಲಿ ಮಾಡಲಾಗಿದ್ದ ಕೆಲ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಸಾಧನೆಯೆಂದು ಸುಳ್ಳು ಹೇಳುತ್ತಾ ಸಿದ್ದರಾಮಯ್ಯ ಅವರು ನಿರಾಸದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ. ಮಾಗಡಿ - ಸೋಮವಾರಪೇಟೆ ರಸ್ತೆ ಅಗಲೀಕರಣ ಪ್ರಸ್ತಾಪವಿದೆಯಾದರೂ ಹಣ ಮೀಸಲಿಟ್ಟಿಲ್ಲ. ರೈತರ ಸಾಲ ಮನ್ನಾದ ನಿರೀಕ್ಷೆಯನ್ನು ಹುಸಿಗೊಳಿಸಲಾಗಿದ್ದು, ಆಯವ್ಯಯವನ್ನು ಹರಿಕಥೆಯಂತೆ ಓದಲಾಗಿದೆಯಷ್ಟೆ ಎಂದು ಅಭಿಪ್ರಾಯಿಸಿದ್ದಾರೆ.

ಸುಳ್ಳಿನ ಸರಮಾಲೆ - ಕೆಜಿಬಿ

ಭಾರೀ ಗಾತ್ರದ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದಾರೆ. ಆದರೆ ಹಿಂದಿನ ಸರ್ಕಾರದ ಸಾಧನೆಗಳನ್ನು ತಮ್ಮದೆಂದು ಬಿಂಬಿಸಿ ಸುಳ್ಳಿನ ಸರಮಾಲೆಯನ್ನು ಸಿಎಂ ಮಂಡಿಸಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ರೂ. 50 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಸ್ವಾಗತಾರ್ಹವಾದರೂ ಕಳೆದ ಬಾರಿಯಂತೆ ಅರ್ಧಂಬರ್ಧ ಹಣ ಬಿಡುಗಡೆ ಮಾಡಿದಂತಾಗದಿರಲಿ. ಅರಣ್ಯ ಇಲಾಖೆ ಆನೆ ಹಾವಳಿ ನಿಯಂತ್ರಣಕ್ಕೆ 276 ಕೋಟಿ ಬೇಡಿಕೆಯಿಟ್ಟಿತ್ತು. ಆದರೆ ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ನಿರಾಶಾದಾಯಕ ಬಜೆಟ್ ಮಂಡಿಸಲ್ಪಟ್ಟಿದೆ ಎಂದು ಕೆಜಿಬಿ ಹೇಳಿದ್ದಾರೆ.

ಜನಪರ ಬಜೆಟ್ : ವೀಣಾ ಸ್ವಾಗತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಜನಪರವಾಗಿದ್ದು, ಸ್ವಾಗತಾರ್ಹವಾಗಿದೆ. ವಿಶೇಷವಾಗಿ ಕೊಡಗು ಜಿಲ್ಲೆಗೂ ಕೆಲವೊಂದು ಕೊಡುಗೆ ದೊರೆತಿದೆ. ಇದರೊಂದಿಗೆ ರಾಜ್ಯಮಟ್ಟದ ಯೋಜನೆಗಳಿಂದಲೂ ಜಿಲ್ಲೆಗೆ ಪ್ರಯೋಜನವಾಗಲಿದೆ ಎಂದು ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ರೂ. 50 ಕೋಟಿಯ ವಿಶೇಷ ಪ್ಯಾಕೇಜ್ ಅನ್ನು ಈ ಬಾರಿಯೂ ಮುಂದುವರಿಸಲಾಗಿದೆ. ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಜನಪ್ರತಿನಿಧಿಗಳ ಗೌರವಧನ ಹೆಚ್ಚಳ ಮಾಡಲಾಗಿದೆ. ಮಲೆನಾಡು ಅಭಿವೃದ್ಧಿ ಯೋಜನೆ, ಶಾಸಕರ ಕ್ಷೇತ್ರಾಭಿವೃದ್ಧಿಗೆ ರೂ. 600 ಕೋಟಿ ಮೀಸಲಿಟ್ಟಿದ್ದು, ಇದು ಜಿಲ್ಲೆಗೂ ನೆರವಾಗಲಿದೆ. ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ನಮ್ಮ ಹೊಲ, ನಮ್ಮ ದಾರಿ ಯೋಜನೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 25 ಕಿ.ಮೀ. ರಸ್ತೆ ಅಭಿವೃದ್ಧಿಗೆ 100 ಕೋಟಿ ನೀಡಲಾಗಿದ್ದು, ಜಿಲ್ಲೆಗೂ ಪ್ರಯೋಜನವಿದೆ. ಜಿಲ್ಲೆಯಲ್ಲಿ ವಿಮಾನ ಇಳಿದಾಣ (ಂiಡಿ Sಣಡಿiಠಿ) ನಿರ್ಮಾಣ, ಮಾಗಡಿ - ಸೋಮವಾರಪೇಟೆ ರಸ್ತೆ ಅಭಿವೃದ್ಧಿ ಬಜೆಟ್‍ನಲ್ಲಿ ಸೇರಿದ್ದು, ಒಟ್ಟಾರೆ ಬಜೆಟ್ ಸ್ವಾಗತಾರ್ಹವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ಕಡೆಗಣನೆ : ಸುನಿಲ್ ಸುಬ್ರಮಣಿ

2017-18ನೇ ಸಾಲಿನ ಬಜೆಟ್‍ನಲ್ಲಿ ದೇಶದ ಬೆನ್ನಲುಬಾದ ರೈತರನ್ನು ಸಂಪೂರ್ಣ ಕಡೆಗಣನೆ ಮಾಡಲಾಗಿದೆ. ಅದರಲ್ಲೂ ಕೊಡಗು ಜಿಲ್ಲೆಯನ್ನು ಲೆಕ್ಕಕ್ಕಿಲ್ಲದಂತೆ ಮಾಡಲಾಗಿದೆ. ವೀರಾಜಪೇಟೆ ಜೈಲು, ಮಡಿಕೇರಿ ಏರ್‍ಸ್ಟ್ರಿಪ್, ಕಾವೇರಿ ಕೊಳ್ಳದ ನಾಲೆಗೆ ಅನುದಾನ ಬಿಟ್ಟರೆ ಬೇರೇನೂ ಇಲ್ಲ ಎಂದು ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ನಾಮಕಾವಸ್ಥೆಗಾದರೂ ವಿಶೇಷ ಪ್ಯಾಕೇಜ್ ಘೋಷಣೆಯಾಗುತ್ತಿತ್ತು. ಈ ಬಾರಿ ಆದೂ ಇಲ್ಲ. ಕೊಡಗಿನ ಜ್ವಲಂತ ಸಮಸ್ಯೆಗಳಾದ ಬರ ಪರಿಸ್ಥಿತಿ, ಕಾವೇರಿ ನದಿ ಸ್ವಚ್ಛತೆ, ತಾಲೂಕುಗಳ ರಚನೆ ಅಲ್ಲದೇ ಹಲವಾರು ವಿಚಾರಗಳ ಬಗ್ಗೆ ಈ ಹಿಂದೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರೂ ಯಾವದೇ ಸ್ಪಂದನೆ ನೀಡಿಲ್ಲ. ಬರ ಪರಿಸ್ಥಿತಿ ಬಂದಾಗ ರಾಜ್ಯದಲ್ಲಿ ಕಾವೇರಿ ನೀರು ನೆನೆಸಿಕೊಳ್ಳುತ್ತಾರೆ. ಆದರೆ ಕಾವೇರಿಯ ನಾಡಿಗೆ ಯಾವದೇ ಅನುದಾನ ಮೀಸಲಿಟ್ಟಿಲ್ಲ. ಈ ಬಜೆಟ್ ಸಂಪೂರ್ಣ ನಿರಾಶಾದಾಯಕ ಆಗಿದ್ದು, ಕೊಡಗಿನ ಜನತೆಯ ಭರವಸೆಗಳನ್ನು ಹುಸಿ ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನ ನಿರ್ಲಕ್ಷ್ಯ - ಸಂಕೇತ್

ಬಜೆಟ್‍ನಲ್ಲಿ ಕೊಡಗನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕಾಫಿ ಬೆಳೆಗಾರರಿಗಾಗಲಿ, ರೈತರಿಗಾಗಲಿ ಸೂಕ್ತವಾಗಿ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಕೊಡಗಿನ ಹಲವು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆಯಾದರೂ ಯಾವೊಂದು ಸಮಸ್ಯೆಯ ಪರಿಹಾರದ ಬಗ್ಗೆಯೂ ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ. ಇದು ದುರಂತ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದ್ದಾರೆ. ಜೆಡಿಎಸ್ ಸರ್ಕಾರದಿಂದ ಮಾತ್ರ ಸರ್ವರ ಏಳಿಗೆ ಸಾಧ್ಯ ಎಂದಿದ್ದಾರೆ.

ನಿರಾಶದಾಯಕ ಬಜೆಟ್ ಭಾರತೀಶ್

ಕೊಡಗಿಗೆ ಬಜೆಟ್‍ನಲ್ಲಿ ಏನನ್ನೂ ನೀಡಿಲ್ಲ ಜನರಿಗೆ ಪ್ರಯೋಜನಕ್ಕೆ ಬಾರದ ವಿಮಾನ ಇಳಿದಾಣವನ್ನು ಪ್ರಸ್ತಾಪಿಸಲಾಗಿದೆ. ಮಳೆ ಇಲ್ಲದೆ ರೈತರು, ಕೃಷಿಕರು ಸೋತಿದ್ದಾರೆ, ಹೀಗಿದ್ದಾಗ್ಯೂ ಸ್ವಲ್ಪ ಮಟ್ಟಿಗಾದರೂ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಮನಸ್ಸು ಮಾಡಿಲ್ಲ. ಕನಿಷ್ಟ ಕೃಷಿ ಸಲಕರಣೆಗಳನ್ನಾದರೂ ರೈತರಿಗೆ ಉಚಿತವಾಗಿ ನೀಡುವ ಘೋಷಣೆ ಮಾಡಬೇಕಿತ್ತು. ಆದರೆ ಅನ್ನು ಕೂಡ ಮಾಡಿಲ್ಲ. ಒಟ್ಟಿನಲ್ಲಿ ನಿರಾಶದಾಯಕ ಬಜೆಟ್‍ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಅಭಿಪ್ರಾಯಿಸಿದ್ದಾರೆ.

ಉತ್ತಮ ಬಜೆಟ್ - ರಮೇಶ್

ಈ ಬಾರಿ ಮುಖ್ಯಮಂತ್ರಿಗಳು ರೈತರು, ಮಹಿಳೆಯರ, ಜನ ಸಾಮಾನ್ಯರ ಪರವಾದ ಬಜೆಟ್‍ನ್ನು ಮಂಡಿಸಿದ್ದಾರೆ. ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತ ಯೋಜನೆಗಳನ್ನು ಘೋಷಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವ ವೇತನ ಹೆಚ್ಚು ಮಾಡಿರುವದು ಕೂಡ ಸ್ವಾಗತಾರ್ಹವಾಗಿದ್ದು, ಉತ್ತಮ ಬಜೆಟ್ ಮಂಡಿಸಲ್ಪಟ್ಟಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಪ್ರತಿಕ್ರಿಯೆಸಿದ್ದಾರೆ. ರೂ. 50 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆಯೂ ಸ್ವಾಗತಾರ್ಹ ಎಂದು ಹೇಳಿದ್ದಾರೆ.