ಮಡಿಕೇರಿ, ಮಾ. 15: ಸುಗಮ ಸಂಚಾರ ವ್ಯವಸ್ಥೆ ಹಾಗೂ ರಸ್ತೆ ಅಪಘಾತ ತಡೆಗಟ್ಟುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಆರ್‍ಟಿಓ ಇಲಾಖೆಯಿಂದ ಅನೇಕ ಸಲಹೆ, ಸೂಚನೆಗಳನ್ನು ನೀಡಿದರೂ ಜೀಪು, ಪಿಕ್‍ಅಪ್ ಹಾಗೂ ಸರಕು ಸಾಗಿಸುವ ವಾಹನಗಳಲ್ಲಿ ಕೆಲಸಗಾರರನ್ನು ಕುರಿಗಳ ರೀತಿಯಲ್ಲಿ ತುಂಬಿಕೊಂಡು ಸಂಚರಿಸುತ್ತಿರುವದು ಇತ್ತೀಚೆಗಿನ ದಿನಗಳಲ್ಲಿ ಕಂಡು ಬಂದಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಸುಂಟಿಕೊಪ್ಪದಲ್ಲಿ ಟ್ಯಾಕ್ರ್ಟರ್ ವಾಹನ ಅಪಘಾತಕ್ಕೀಡಾಗಿ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರು ಕೆಲಸಗಾರರು ಮೃತಪಟ್ಟಿರುವದು ಹಾಗೂ ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಕುಕ್ಲೂರು ಬಳಿ 20 ಕ್ಕಿಂತ ಹೆಚ್ಚು ಕೆಲಸಗಾರರನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಮಾಡುವ ಪಿಕ್‍ಅಪ್ ವಾಹನ ಅಪಘಾತಕ್ಕೀಡಾಗಿ ಎಲ್ಲಾ ಕೆಲಸಗಾರರಿಗೆ ತೀವ್ರತರವಾದ ಗಾಯವಾಗಿ ಮಡಿಕೇರಿ ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಎಲ್ಲಾ ವಾಹನಗಳು ಅಂದರೆ ಆಟೋ, ಶಾಲಾ ವಾಹನ, ಮ್ಯಾಕ್ಸಿ ಕ್ಯಾಬ್ ಹಾಗೂ ಸರಕು ಸಾಗಿಸುವ ವಾಹನಗಳಲ್ಲಿ ಕೆಲಸಗಾರರನ್ನು ಸಾಗಿಸುವದು ಐಎಂವಿ ಕಾಯ್ದೆಯ ಪ್ರಕಾರ ಅಪರಾಧವಾಗಿದ್ದು, ವಾಹನದ ಮಾಲೀಕರು ಹಾಗೂ ಚಾಲಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗು ವದು. ಚಾಲಕನ ಚಾಲನಾ ಪರವಾನಗಿಯನ್ನು ರದ್ದು ಪಡಿಸಲು ಆರ್‍ಟಿಓ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವದು. ಈ ಬಗ್ಗೆ ಎಲ್ಲಾ ಆಟೋ, ಶಾಲಾ ವಾಹನ ಹಾಗೂ ಮ್ಯಾಕ್ಸಿ ಕ್ಯಾಬ್‍ನ ಮಾಲೀಕರು, ಚಾಲಕರುಗಳು ಎಚ್ಚರ ವಹಿಸಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಚಿಸಿದ್ದಾರೆ.
ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶದನ್ವಯ ವಿಮೆ ಇಲ್ಲದ ವಾಹನಗಳನ್ನು ಜಪ್ತಿ ಮಾಡಿ ವಾಹನದ ಮಾಲೀಕರುಗಳು ವಿಮಾ ಪಾಲಿಸಿಗಳನ್ನು ತಂದು ಹಾಜರುಪಡಿಸುವವರೆಗೆ ಪೊಲೀಸ್ ವಶದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ವಾಹನದ ಮಾಲೀಕರುಗಳು ಈ ಬಗ್ಗೆ ಎಚ್ಚರ ವಹಿಸಬೇಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.