ಸುಂಟಿಕೊಪ್ಪ, ಮಾ. 15: ಕೊಡಗಿನಲ್ಲಿ ಭೀಕರ ಬರಗಾಲ ಬಂದಿದ್ದು, ರೈತರು ತೀವ್ರ ಸಂಕಷ್ಟದಲ್ಲಿರುವದರಿಂದ ರಾಜ್ಯ ಸರಕಾರ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕಂದಾಯ ಪರಿವೀಕ್ಷಕರಿಗೆ ಮನವಿ ಸಲ್ಲಿಸಿತು.
ರೂ. 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಬೇಕೆಂದು ಪ್ರಗತಿ ಪರ ಕೃಷಿಕರಾದ ಯಂಕನ ಎಂ. ಕರುಂಬಯ್ಯ ಆಗ್ರಹಿಸಿದರು. ಕೊಡಗಿನ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದರೂ ಇಲ್ಲಿವರೆಗೆ ರಾಜ್ಯ ಸರಕಾರ ಚಿಕ್ಕಾಸು ಬಿಡುಗಡೆಗೊಳಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕೃಷಿಕರು, ದಂತ ವೈದ್ಯರಾದ ಡಾ. ಶಶಿಕಾಂತ ರೈ ಆರೋಪಿಸಿದರು.
ಕೊಡಗಿನ ರೈತರು ಸಂಕಷ್ಟದಲ್ಲಿರುವದನ್ನು ಪರಿಗಣಿಸಿ ಸರಕಾರ ಬಜೆಟ್‍ನಲ್ಲಿ ಸಾಲ ಮನ್ನಾ ಮಾಡುವ ಮೂಲಕ ಅನ್ನದಾತರ ನೆರವಿಗೆ ಬರಬೇಕೆಂದು ಸುಂಟಿಕೊಪ್ಪ ನಾಡು ಕಚೇರಿಯ ಕಂದಾಯ ಪರಿವೀಕ್ಷಕ ಕೃಷ್ಣಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಪಟ್ಟೆಮನೆ ಕೆ. ಶೇಷಪ್ಪ, ಮಾದಾಪುರ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಬಿಜ್ಜಂಡ ಮೊಣ್ಣಪ್ಪ, ಹೋಬಳಿ ಬಿಜೆಪಿ ಅಧ್ಯಕ್ಷ ದಾಸಂಡ ರಮೇಶ್, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯೆ ಜ್ಯೋತಿ ಭಾಸ್ಕರ್, ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ವಡ್ಡಚೆಟ್ಟೀರ ತಮ್ಮಯ್ಯ, ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೋಮಣಿ, ಬೆಳೆಗಾರರಾದ ಸಾಬು ಉತ್ತಪ್ಪ, ಬಿ.ಕೆ. ಮೋಹನ್, ನಾಗೇಶ್ ಪೂಜಾರಿ, ಕೆದಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮಯ್ಯ, ಮಾಜಿ ಸದಸ್ಯ ರಮೇಶ್, ಕೊಡಗರಹಳ್ಳಿ ಅಂದಗೋವೆ ಮತ್ತಿತರ ಭಾಗಗಳಿಂದ ಕೃಷಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.