ಸೋಮವಾರಪೇಟೆ, ಮಾ. 14: ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ಜಯಂತಿಯ ಅಂಗವಾಗಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಜಾತ್ಯತೀತ ಸಮ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಸಮಾವೇಶವನ್ನು ವಿಚಾರವಾದಿ ಪ್ರೊ. ಗೋವಿಂದರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೋದಿಯವರ 2022ರ ನವಭಾರತದ ಬದಲಾಗಿ ಅಂಬೇಡ್ಕರ್ ಕನಸಿನ ಸಮಾನತೆಯ, ಪ್ರಗತಿಯ ನಾಳಿನ ಭಾರತ ನಿರ್ಮಾಣದತ್ತ ಜನರು ಕನಸು ಕಾಣಬೇಕಾಗಿದೆ ಎಂದರು.

ಇಂದಿಗೂ ಸಮಾಜದಲ್ಲಿರುವ ಮೂಢನಂಬಿಕೆ, ಮೂರ್ತಿ ಪೂಜೆ, ಜ್ಯೋತಿಷ್ಯ ಶಾಸ್ತ್ರ, ವಾಸ್ತು ಪೂಜೆಗಳ ಗುಂಗಿನಲ್ಲಿ ಮುಳುಗಿರುವ ಜನರಿಗೆ ವಿದ್ಯಾಭ್ಯಾಸದೊಂದಿಗೆ ಸಾಮಾಜಿಕ ಪ್ರಜ್ಞೆ ಮೂಡಿಸಿ ಸಂವಿಧಾನದ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದರೆ ಮಾತ್ರ ಬಾಬಾ ಸಾಹೇಬರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗ ವಹಿಸಿದ್ದ ರಾಜ್ಯ ಪಶುಸಂಗೋಪನ ಸಚಿವ ಎ. ಮಂಜು ಮಾತನಾಡಿ, ಹುಟ್ಟಿನಿಂದಲೇ ಬಡತನವನ್ನು ಅನುಭವಿಸಿ ಅಸ್ಪøಶ್ಯತೆಯ ಪಿಡುಗಿನಿಂದ ನೊಂದು ಈ ದೇಶದ ಅತ್ಯುನ್ನತ ಸಂವಿಧಾನವನ್ನು ರೂಪಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬುದ್ಧ, ಬಸವಣ್ಣ ಹಾಗೂ ಕನಕನಿಗಿಂತ ಶ್ರೇಷ್ಠರಾಗಿದ್ದಾರೆ ಎಂದರು. ‘ಭೀಮಧ್ವನಿ’ ಕವನ ಸಂಕಲನವನ್ನು ಬಿಡುಗಡೆ ಮಾಡಿದ ಸಮಾಜವಾದಿ ಚಿಂತಕ ರುದ್ರಪ್ಪ ಹನಗವಾಡಿ ಮಾತನಾಡಿ, ನಾಗರಿಕತೆಯ ಸಮಾಜದಲ್ಲಿ ಅನಾಗರಿಕತೆ ತಾಂಡವವಾಡುತ್ತಿದೆ. ಇಂತಹ ಅನಾಗರಿಕ ಸಂಸ್ಕøತಿಯನ್ನು ಬರಹದ ಮೂಲಕ ಜಗತ್ತಿಗೆ ತೋರಿಸುವವನು ಶ್ರೇಷ್ಠ ಲೇಖಕನಾಗುತ್ತಾನೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಸಾಹಿತ್ಯವನ್ನು ಹೆಚ್ಚಾಗಿ ಓದಿದರೆ ಯಾವದೇ ಅನ್ಯಾಯವನ್ನು ಧೈರ್ಯವಾಗಿ ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಮಾತನಾಡಿ, ಬಾಬಾ ಸಾಹೇಬರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ರಾಜ್ಯದಲ್ಲಿ 125 ವಸತಿ ಶಾಲೆಗಳನ್ನು ಪ್ರಾರಂಭಿಸುವಂತೆ ಸರಕಾರಕ್ಕೆ ರಾಜ್ಯ ಸಮಿತಿಯಿಂದ ಮನವಿ ಮಾಡಲಾಗಿದೆ. ಈ ಶಾಲೆಗಳಿಗೆ ಸಮಾಜ ಸುಧಾರಣೆಗಾಗಿ ಹೋರಾಡಿದ ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ, ಛತ್ರಪತಿ ಶಿವಾಜಿ ಮಹಾರಾಜ್, ನಾಲ್ವಡಿ ಕೃಷ್ಣ ರಾಜ ಒಡೆಯರ್, ಪೆರಿಯಾರ್, ಶ್ರೀ ನಾರಾಯಣ ಗುರು ಅವರ ಹೆಸರನ್ನು ಇಡಬೇಕೆಂದು ಪ್ರಸ್ತಾಪಿಸಲಾಗಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಎಂ.ಎಸ್. ವೀರೇಂದ್ರ, ಪ್ರಮುಖರಾದ ವಿ.ಪಿ. ಶಶಿಧರ್, ಎಸ್.ಎಂ. ಚಂಗಪ್ಪ, ಕೆ.ಕೆ. ಮಂಜುನಾಥ್ ಕುಮಾರ್, ರಾಜಮ್ಮ ರುದ್ರಯ್ಯ, ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ರಾದ ಜೀವನಳ್ಳಿ ವೆಂಕಟೇಶ್, ಆನಂದ ಬೆಳ್ಳಾರೆ, ಡಿ.ಎಸ್. ಕಾಂತರಾಜ್, ಕೆ.ವಿ. ರಾಜು, ಜಯಪ್ಪ ಹಾನಗಲ್ಲು ಮತ್ತಿತರರು ಉಪಸ್ಥಿತರಿದ್ದರು.