ಕುಶಾಲನಗರ, ಮಾ. 15: ಕುಶಾಲನಗರದಲ್ಲಿ ನಡೆದ ಹೊನಲು ಬೆಳಕಿನ ಕೊಡಗು ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ಅಂದ್ರು ಮತ್ತು ಅನೀಶ್ ಮಾಲೀಕತ್ವದ ನಂಜರಾಯಪಟ್ಟಣದ ಡಾಟ್ ರೈಡರ್ಸ್ ಪ್ರಥಮ ಸ್ಥಾನಗಳಿಸಿ ಆಕರ್ಷಕ ಟ್ರೋಫಿ ಹಾಗೂ ನಗದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆದಂ ಮಾಲೀಕತ್ವದ ಕುಶಾಲನಗರದ ರಂಜಿತ್ ಫ್ರೆಂಡ್ಸ್ ಅಟಾಕರ್ಸ್ ದ್ವಿತೀಯ ಸ್ಥಾನಗಳಿಸಿ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡರೆ, ಮನಿಲ್ ಕುಮಾರ್ ಮಾಲೀಕತ್ವದ ಕಿಬ್ಬೆಟ್ಟದ ಬುಲ್ ರೈಡರ್ಸ್ ತೃತೀಯ ಹಾಗೂ ಹೆಬ್ಬಾಲೆಯ ನೈಟ್ ರೈಡರ್ಸ್ ತಂಡ ಚತುರ್ಥ ಸ್ಥಾನಗಳಿಸಿ ನಗದು ಪ್ರಶಸ್ತಿ ಪಡೆದುಕೊಂಡಿತು.
ಪ್ರಥಮ ಸ್ಥಾನ ವಿಜೇತರಿಗೆ ರೂ. 44,444, ದ್ವಿತೀಯ ಸ್ಥಾನಕ್ಕೆ ರೂ. 22,222, ತೃತೀಯ ಸ್ಥಾನಕ್ಕೆ ರೂ. 11,111 ಹಾಗೂ ಚತುರ್ಥ ಸ್ಥಾನಕ್ಕೆ ರೂ. 5,555 ನಗದು ವಿತರಿಸಲಾಯಿತು. 3 ದಿನಗಳ ಕಾಲ ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಆಟಗಾರರು ಪಾಲ್ಗೊಂಡಿದ್ದರು.
ರಂಜಿತ್ ಫ್ರೆಂಡ್ಸ್ ತಂಡದ ನಾಯಕ ಸಿ.ಜೆ. ತವನ್ ಪಂದ್ಯ ಪುರುಷೋತ್ತಮ, ಡಾಟ್ ರೈಡರ್ಸ್ ತಂಡದ ನಾಯಕ ಅವಿನಾಶ್ ಉತ್ತಮ ದಾಳಿಗಾರ, ಬುಲ್ ರೈಡರ್ಸ್ ತಂಡದ ಆದರ್ಶ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದುಕೊಂಡರು.
ಜ್ಞಾನಭಾರತಿ ಸ್ಪೋರ್ಟ್ ಕ್ಲಬ್ ಹಾಗೂ ಕೊಡಗು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದು ಲೀಗ್ ಮಾದರಿಯಲ್ಲಿ ಒಟ್ಟು 32 ಪಂದ್ಯಾವಳಿಗಳು 3 ದಿನಗಳ ಕಾಲ ನಡೆಯಿತು. ಕುಶಾಲನಗರ ಸೇರಿದಂತೆ ಜಿಲ್ಲೆ, ನೆರೆ ಜಿಲ್ಲೆಗಳ 10 ಸಾವಿರಕ್ಕೂ ಅಧಿಕ ವೀಕ್ಷಕರು ಫೈನಲ್ ಪಂದ್ಯಾಟದಲ್ಲಿ ನೆರೆದಿದ್ದರು. ಸ್ಥಳೀಯ ಕಾವೇರಿ ಮತ್ತು ಇ ಡಿಜಿಟಲ್ ಸುದ್ದಿವಾಹಿನಿಗಳಲ್ಲಿ ಪಂದ್ಯಾಟಗಳ ನೇರಪ್ರಸಾರ ಏರ್ಪಡಿಸಲಾಗಿತ್ತು.
ಪಂದ್ಯಾವಳಿಯ ತೀರ್ಪು ಗಾರರಾಗಿ ಕೃಷ್ಣ, ಪ್ರವೀಣ್ ಕುಮಾರ್, ಆನಂದ್, ಗಣೇಶ್, ಕೃಷ್ಣ, ಪ್ರಸಾದ್, ನಾಗರಾಜ್, ರಮೇಶ್ ಕುಮಾರ್, ಕೃಷ್ಣಪ್ಪ ಹಾಗೂ ಮಂಜು ಕಾರ್ಯನಿರ್ವಹಿಸಿದರು. ಬೆಂಗಳೂರಿನ ಲಕ್ಷ್ಮೀಶ್ (ಜಿಮ್ಮಿ) ಪಂದ್ಯಾಟಗಳ ಆಕರ್ಷಕ ವೀಕ್ಷಕ ವಿವರಣೆ ನೀಡಿದರು.
ಜ್ಞಾನಭಾರತಿ ಸ್ಪೋಟ್ಸ್ ಕ್ಲಬ್ ಮತ್ತು ಕೊಡಗು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪ್ರಮುಖರಾದ ಎ.ಆರ್. ಅವಿನಾಶ್, ಹೆಚ್.ಎಸ್. ಉತ್ತಪ್ಪ, ಸಿ.ಎಸ್. ಮಧು, ಕಪಿಲ್ ಕುಮಾರ್, ರಾಷ್ಟ್ರೀಯ ಹ್ಯಾಂಡ್ಬಾಲ್ ತಂಡದ ನಾಯಕ ಗ್ರೀನಿಜ್ ಡಿಕುನ್ನ ಮತ್ತಿತರರು ಇದ್ದರು.