ಭಾಗಮಂಡಲ, ಮಾ. 16: ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ ಎಂದು ಜಿಲ್ಲಾ ಪಂಚಯಿತಿ ಅಧ್ಯಕ್ಷ ಬಿ.ಎ.ಹರೀಶ್ ಹೇಳಿದರು.ಭಾಗಮಂಡಲದ ಗೌಡ ಸಮಾಜದಲ್ಲಿ ಜಿಲ್ಲಾ ಪಂಚಾಯಿತಿ, ತೋಟಗಾರಿಕಾ ಇಲಾಖೆ ಮತ್ತು ಭಾಗಮಂಡಲದ ಭಗಂಡೇಶ್ವರ ರೈತ ಉತ್ಪಾದಕರ ಕಂಪೆನಿ ಸಹಯೋಗದಲ್ಲಿ ನಡೆದ ಸಂಬಾರ ಬೆಳೆಗಳ ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವಜನತೆ ಇಂದು ಪಟ್ಟಣದ ಕಡೆಗೆ ವಾಲುತ್ತಿದ್ದು ಕೃಷಿ ಚಟುವಟಿಕೆಗಳತ್ತ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಕೃಷಿಕರು ಉತ್ತಮ ಬೀಜದ ಆಯ್ಕೆ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದರು. ಭಗಂಡೇಶ್ವರ ರೈತ ಉತ್ಪಾದಕರ ಕಂಪೆನಿಯ ಉಪಾಧ್ಯಕ್ಷ ಕೋಡಿ ಪೊನ್ನಪ್ಪ ಮಾತನಾಡಿ, ರೈತ ಉತ್ಪಾದಕರ ಕಂಪೆನಿಯು ಕಳೆದ ಒಂಭತ್ತು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದು, ರೈತರು ಸ್ವಾವಲಂಬಿಗಳಾಗಿ ಬೆಳೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಅಲ್ಲದೆ ರಾಜ್ಯದ 58 ಕಂಪೆನಿಗಳಿದ್ದರೆ ಈ ಕಂಪೆನಿಯು ಅಭಿವೃದ್ಧಿ ಚಟುವಟಿಕೆಗಳಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಭಾಗಮಂಡಲ ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ವಹಿಸಿದ್ದರು. ಸಭೆಯಲ್ಲಿ ಭಾಗಮಂಡಲ ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ಹೊಸೂರು ಜೆ. ಸತೀಶ್ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಸಂಧ್ಯಾ, ಶ್ರೀಧರ್, ತೋಟಗಾರಿಕಾ ಇಲಾಖೆಯ ಅಂಕೇಗೌಡ, ತಾಂತ್ರಿಕ ಸಲಹೆಗಾರರಾದ ಯೋಗೇಶ್, ಬಿ.ಡಿ. ವಸಂತ್, ಎಂ. ಪ್ರಮೋದ್, ಭಾಗಮಂಡಲ ರೈತ ಉತ್ಪಾದಕ ಕಂಪೆನಿಯ ಕಾರ್ಯ ನಿರ್ವಹಣಾಧಿಕಾರಿ ಬಿನ್ನಿ ಬಿ.ಎಸ್. ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.