ಮಡಿಕೇರಿ, ಮಾ. 16: 1908ರಲ್ಲಿ ಸ್ಥಾಪನೆಗೊಂಡು ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ, ವಿದ್ಯಾರ್ಜನೆಗೆ ದಾರಿದೀಪವಾಗಿ ಇಂದಿಗೂ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಾ ಸಾಗುತ್ತಿರುವ ಕೊಡಗು ಗೌಡ ವಿದ್ಯಾಸಂಘದ (ಆಗಿನ ಗೌಡ ಬೋರ್ಡಿಂಗ್)ದ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿ ಕಂಡುಬರುತ್ತಿದೆ. ಚುನಾವಣೆ ಎದುರಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯ ಸಾರಥ್ಯಕ್ಕೆ ತಾನು - ನಾನು ಎಂಬಂತೆ ಕಣಕ್ಕಿಳಿದಿದ್ದಾರೆ. ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಒಟ್ಟು 15 ಸ್ಥಾನಕ್ಕೆ 47 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಇದುವರೆಗೆ ಆಡಳಿತ ನಡೆಸಿದವರೂ ಸೇರಿದಂತೆ ಇನ್ನಿತರ ಗಣ್ಯರೂ ಸ್ಪರ್ಧಾ ಕಣಕ್ಕಿಳಿದಿದ್ದು, ತೀವ್ರ ಕುತೂಹಲ ಸೃಷ್ಟಿಸಿದೆ.

ಮಡಿಕೇರಿ ಮಾತ್ರವಲ್ಲದೆ, ಮೈಸೂರಿನಲ್ಲಿಯೂ ಹಾಸ್ಟೆಲ್ ಹೊಂದಿರುವ ಪ್ರತಿಷ್ಠಿತ ಕೊಡಗು ಗೌಡ ವಿದ್ಯಾಸಂಘದ ಮುಂದಿನ 5 ವರ್ಷದ ಅವಧಿಗೆ ತಾ. 26ರಂದು ಚುನಾವಣೆ ನಡೆಯಲಿದೆ. ಒಟ್ಟು 4388 ಮಂದಿ ಸದಸ್ಯ ಮತದಾರ ಸದಸ್ಯರನ್ನು ಹೊಂದಿರುವ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಕೋಶಾಧಿಕಾರಿ ಸೇರಿದಂತೆ, 10 ಮಂದಿ ನಿರ್ದೇಶಕರು ಸೇರಿ ಒಟ್ಟು 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕಾ ಕಾರ್ಯ ಪೂರ್ಣಗೊಂಡಿದ್ದು, ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆದಿದ್ದು, 47 ಮಂದಿ ಸ್ಪರ್ಧಾಳುಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ಕಂಡುಬಂದಿದೆ. ಮೂರು ಬಣಗಳ ಮೂಲಕ ಪೈಪೋಟಿಗಿಳಿದಿದ್ದರೆ ಒಬ್ಬರು ವೈಯಕ್ತಿಕವಾಗಿ ಕಣಕ್ಕಿಳಿದಿದ್ದಾರೆ. ಕಳೆದ ಮೂರು ಅವಧಿಯಲ್ಲಿ ಅಂದರೆ 15 ವರ್ಷಗಳ ಕಾಲ ಅಧ್ಯಕ್ಷರಾಗಿ ಆಡಳಿತ ನಡೆಸಿದ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿದ್ದ ದಂಬೆಕೋಡಿ ಸುಬ್ರಾಯ, ಆನಂದ, ಕೊಡಗು ಗೌಡ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷರಾಗಿದ್ದ ತುಂತಜೆ ವೆಂಕಟೇಶ್ (ಗಣೇಶ್) ಹಾಗೂ ಹಿರಿಯರಾದ ಪರಿವಾರ ಅಪ್ಪಾಜಿ ಅವರುಗಳು ಸ್ಪರ್ಧಿಸಿದ್ದಾರೆ.

ಹೊಸೂರು ರಮೇಶ್ ಜೋಯಪ್ಪ ಅವರ ತಂಡದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಸಂಘದಲ್ಲಿ 3 ಅವಧಿಯಲ್ಲಿ ಖಜಾಂಚಿಯಾಗಿದ್ದ ಪೊನ್ನಚನ ಜೆ. ಸೋಮಣ್ಣ, ಕಾರ್ಯದರ್ಶಿ ಸ್ಥಾನಕ್ಕೆ ಬೆಪ್ಪುರನ ಮೇದಪ್ಪ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಂಜರಾಯಪಟ್ಟಣ ಗೌಡ ಯೂತ್ ಕ್ಲಬ್ ಅಧ್ಯಕ್ಷ ನಡುಮನೆ ಸಿ. ಪವನ್ (ಚಿಂತು), ಖಜಾಂಚಿ ಸ್ಥಾನಕ್ಕೆ ಯುವ ಒಕ್ಕೂಟದಲ್ಲಿ ತೊಡಗಿಸಿಕೊಂಡಿದ್ದ ವಕೀಲ ಮುಕ್ಕಾಟಿ ಎಸ್. ಜಯಚಂದ್ರ ಅವರುಗಳು ಸೇರಿದಂತೆ 10 ಮಂದಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆಗಿಳಿದಿದ್ದಾರೆ.

ದಂಬೆಕೋಡಿ ಸುಬ್ರಾಯ ಆನಂದ್ ಅವರು ಇತ್ತೀಚೆಗೆ ತಾನೇ ಪ್ರತಿಷ್ಠೆಯ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದವರು ಇದೀಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ವಿದ್ಯಾ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಆನಂದ ಅವರ ತಂಡದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಳೆದ 3 ಅವಧಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ವಿವಿಧ ಸಂಘಟನೆಗಳಲ್ಲಿ ತೊಡಗಿಸಿ ಕೊಂಡಿರುವ ಅಂಬೆಕಲ್ಲು ನವೀನ್ ಕುಶಾಲಪ್ಪ, ಕಾರ್ಯದರ್ಶಿ ಸ್ಥಾನಕ್ಕೆ ಸೂದನ ಎಸ್. ಈರಪ್ಪ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ತಳೂರು ಕೆ. ದಿನೇಶ್‍ಕುಮಾರ್, ಖಜಾಂಚಿ ಸ್ಥಾನಕ್ಕೆ ಕಟ್ಟೆಮನೆ ಆರ್. ಸೋನಾಜಿತ್ ಸೇರಿದಂತೆ 10 ಮಂದಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ತುಂತಜೆ ವೆಂಕಟೇಶ್ (ಗಣೇಶ್) ಅವರ ತಂಡದಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಅಮೆ ಪಾಲಾಕ್ಷ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಕೋರನ ಸುನಿಲ್, ಸೇರಿದಂತೆ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇನ್ನುಳಿದಂತೆ ಅಧ್ಯಕ್ಷ ಸ್ಥಾನಕ್ಕೆ ಪರಿವಾರ ಅಪ್ಪಾಜಿ ಸ್ಪರ್ಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕೊಟ್ಟಕೇರಿಯನ ದಯಾನಂದ, ಮೊಟ್ಟನ ಜ್ಯೋತಿ ಶಂಕರ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮೂಡಗದ್ದೆ ದಾಮೋದರ ಅವರುಗಳು ಸ್ಪರ್ಧಿಸಿದ್ದಾರೆ.

ನಿರ್ದೇಶಕರು

ಸಂಘದಲ್ಲಿ 10 ನಿರ್ದೇಶಕರ ಸ್ಥಾನವಿದ್ದು, ಈ ಪೈಕಿ 7 ಸ್ಥಾನ ಪುರುಷ ಹಾಗೂ 3 ಸ್ಥಾನ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ. 7 ಸ್ಥಾನಗಳಿಗೆ ಒಟ್ಟು 23 ಮಂದಿ ಸ್ಪರ್ಧೆಗಿಳಿದಿದ್ದಾರೆ. ಹುದೇರಿ ಜಗದೀಶ್, ಕುಂಬಗೌಡನ ದೇವಯ್ಯ ವಿನೋದ್, ಪರಿಚನ ಸತೀಶ್ ತಿಮ್ಮಯ್ಯ, ಪೊಕ್ಕುಳಂಡ್ರ ಮನೋಜ್, ಹೊಸೂರು ಶಿವಪ್ರಕಾಶ್, ಬೇಕಲ್ ಡಿ. ದೇವರಾಜು, ಮೊಟ್ಟೆರ ಎಸ್. ಬೆಳ್ಯಪ್ಪ, ಉಡುದೋಳಿ ಗಿರೀಶ್, ಕೆದಂಬಾಡಿ ಕೀರ್ತಿಕುಮಾರ್, ದೇವಂಗೋಡಿ ಹರ್ಷ, ಜೈನಿರ ಪದ್ಮನಾಭ, ಬಾರಿಕೆ ಮನು ಮಹೇಶ್, ತಳೂರು ಕೆ. ದಿನೇಶ್ ಕುಮಾರ್, ಪಾಂಡನ ಕೆ. ಗಣೇಶ್, ತಳೂರು ಕೆ. ಕಾಳಪ್ಪ, ಪಂಜಿಕಲ್ಲು ಎಲ್. ಸುರೇಶ್ ಸಂಪಾಜೆ, ಕುದುಪಜೆ ಬೋಜಪ್ಪ, ಮುಕ್ಕಾಟಿ ಎಸ್. ಗಣಪತಿ, ಪೇರಿಯನ ಕೆ. ಉದಯ, ಬಳಪದ ಆರ್. ಮಂದಣ್ಣ, ಬೈನೆರವನ ಇಂದ್ರಕುಮಾರ್, ಪಾಣತ್ತಲೆ ಮಂದಪ್ಪ, ಕೇಕಡ ದಿನೇಶ್.

ಮಹಿಳೆಯರು

ಮೂರು ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಒಟ್ಟು 8 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ನೈಯ್ಯಣಿ ಹೇಮಲತ, ಪಾಂಡನ ಪುಷ್ಪವೇಣಿ ಪ್ರಕಾಶ್, ಕುಕ್ಕುನೂರು ರುಕ್ಮಿಣಿ, ಕಾಳೇರಮ್ಮನ ಲತಾ, ಚೆರಿಯಮನೆ ರೋಹಿಣಿ, ಮೇಡತ್ತನ ದೇವಕಿ, ಕೆದಂಬಾಡಿ ಕಾಂಚನ ಕೀರ್ತನ್, ಕಾಯರ ಲತಾ ದಯಾನಂದ, ಈ ಬಾರಿಯ ಚುನಾವಣೆ ತೀವ್ರ ಪೈಪೋಟಿಯೊಂದಿಗೆ ತೀವ್ರ ಕುತೂಹಲ ಮೂಡಿಸಿದೆ. ಇಂದು ನಾಮಪತ್ರ ಪರಿಶೀಲನೆ. ಎಲ್ಲಾ ಸ್ಫರ್ಧಾಳುಗಳು ಸದಸ್ಯ ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಮತ ಯಾಚನೆಯಲ್ಲಿ ತೊಡಗಿಸಿ ಕೊಂಡಿದ್ದು, ಮತದಾರ ಯಾರನ್ನು ಆಯ್ಕೆ ಮಾಡುತ್ತಾರೆಂಬದು ಮಾತ್ರ ನಿಗೂಢ.