*ಗೋಣಿಕೊಪ್ಪಲು, ಮಾ. 16: ಹಳ್ಳಿಗಟ್ಟು ಗ್ರಾಮದ ಬುಡಕಟ್ಟು ಸಮುದಾಯದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಕುಟುಂಬಗಳ ಸಂಘ ನಿನ್ನೆ ಅಹೋರಾತ್ರಿ ಧರಣಿ ನಡೆಸಿತು.
ಪೊನ್ನಂಪೇಟೆ ತಾ.ಪಂ. ಕಚೇರಿ ಮುಂಭಾಗ ಸಂಘದ ಸಂಚಾಲಕ ವೈ.ಬಿ.ಗಪ್ಪು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುಂದಾ ಗ್ರಾಮದ ಸರ್ವೆ ನಂ 91/1ರಲ್ಲಿ ಆರು ಏಕ್ರೆ ಭೂಮಿ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದರೂ, ತಾಲೂಕಿನ ಅಧಿಕಾರಿಗಳು ಪುನರ್ವಸತಿ ಕಲ್ಪಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಪ್ರತಿ ಕುಟುಂಬಕ್ಕೂ ಪುನರ್ವಸತಿ ಕಲ್ಪಿಸಿ ಹಕ್ಕುಪತ್ರ ನೀಡುವವರೆಗೂ ಅಹೋರಾತ್ರಿ ಪ್ರತಿಭಟನೆ ನಡೆಸ ಲಾಗುವದು ಎಂದು ಗಪ್ಪು ತಿಳಿಸಿದರು.
ಸುಮಾರು 100ಕ್ಕೂ ಹೆಚ್ಚು ಕುಟುಂಬದ ಸದಸ್ಯರುಗಳು ಪ್ರತಿಭಟನೆಯಲ್ಲಿ ನಿರತರಾಗಿ ತಮ್ಮ ಹಕ್ಕಿಗಾಗಿ ಘೋಷಣೆ ಕೂಗುತ್ತಾ ಹೋರಾಟ ನಡೆಸಿದರು.
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್ ಪ್ರತಿಭಟನಾಗಾರರನ್ನು ಉದ್ದೇಶಿಸಿ ಮಾತನಾಡಿ ಬುಡಕಟ್ಟು ನಿರಾಶ್ರಿತರಿಗೆ ಗುರುತಿಸಿರುವ ಸ್ಥಳದಲ್ಲಿ ಜಾಗ ನೀಡಲಾಗಿದೆ. 8 ದಿನಗಳ ಒಳಗೆ ಹಕ್ಕು ಪತ್ರ ನೀಡಲಾಗುವದು. ಹಕ್ಕುಪತ್ರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.