ಸೋಮವಾರಪೇಟೆ, ಮಾ. 16: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದ ಸಂದರ್ಭ ಅಧ್ಯಕ್ಷರು ಆಡಿಯೋ ರೆಕಾರ್ಡರ್ ಹೊರತೆಗೆದು ಅಧಿಕಾರಿ ಹಾಗೂ ಅಧ್ಯಕ್ಷರ ನಡುವಿನ ಸಂಭಾಷಣೆಯನ್ನು ಕೇಳಿಸಿದ ಘಟನೆ ನಡೆಯಿತು.
ಇದರಿಂದ ಸಿಟ್ಟಿಗೆದ್ದ ಸದಸ್ಯರು ಅಧಿಕಾರಿಯ ಪರ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಏಕಾಂಗಿಯಾದ ಅಧ್ಯಕ್ಷರು ರೆಕಾರ್ಡರ್ನ್ನು ತಮ್ಮ ವ್ಯಾನಿಟಿ ಬ್ಯಾಗಿನೊಳಗೆ ಹಾಕಿದರು. ತಾ.ಪಂ. ಸಾಮಾನ್ಯ ಸಭೆ ಇಂತಹದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಅಧಿಕಾರಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಭರದಲ್ಲಿ ಅಧ್ಯಕ್ಷೆಯೇ ಕಸಿವಿಸಿಗೆ ಒಳಗಾಗಬೇಕಾಯಿತು.
ಜಿ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರ ರಮೇಶ್ ಹಾಗೂ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರ ನಡುವೆ ಕೊಡ್ಲಿಪೇಟೆ ಭಾಗದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮೊಬೈಲ್ ಸಂಭಾಷಣೆ ನಡೆದಿತ್ತು. ಇದನ್ನು ರೆಕಾರ್ಡಿಂಗ್ ಮಾಡಿಟ್ಟುಕೊಂಡಿದ್ದ ಅಧ್ಯಕ್ಷರು, ಸಭೆಯಲ್ಲಿ ಅಧಿಕಾರಿಯ ಬೆವರಿಳಿಸಲು ಸಿದ್ಧತೆ ನಡೆಸಿದ್ದರು.
ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿತ್ತು. ಅಧಿಕಾರಿ ರಮೇಶ್ ಅವರು ಎಲ್ಲಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ಸಂದರ್ಭ ಅಧ್ಯಕ್ಷರು ಏಕಾಏಕಿ ತಮ್ಮ ಬ್ಯಾಗಿನೊಳಗಿಂದ ರೆಕಾರ್ಡರ್ ತೆಗೆದು ಅದರಲ್ಲಿದ್ದ ಧ್ವನಿ ಸಂಭಾಷಣೆಯನ್ನು ಕೇಳಿಸಿದರು.
ನೀರಿನ ಸಮಸ್ಯೆ ಬಗ್ಗೆ ಸಾಮಾನ್ಯ ಚರ್ಚೆ ನಡೆಸಿದ್ದನ್ನೇ ರೆಕಾರ್ಡಿಂಗ್ ಮಾಡಿ ಕೇಳಿಸುತ್ತಿದ್ದೀರಾ? ಇದರಿಂದ ನಿಮಗೇನು ಲಾಭ? ಅಧಿಕಾರಿಗಳನ್ನು ಹೆದರಿಸಲು ಇಂತಹ ತಂತ್ರ ಮಾಡಿದ್ದೀರಾ? ಹೀಗಾದರೆ ಅಧಿಕಾರಿಗಳು ಕೆಲಸ ಮಾಡೋದಾದರೂ ಹೇಗೆ? ರಮೇಶ್ ಅವರು ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಉತ್ಸಾಹಕ್ಕೆ ತಣ್ಣೀರೆರೆಚಲು ಯತ್ನಿಸುತ್ತಿದ್ದೀರಾ? ಎಂದು ಒಂದೇ ಸಮನೇ ಸದಸ್ಯರುಗಳು ಅಧ್ಯಕ್ಷರ ವಿರುದ್ಧ ಮುಗಿಬಿದ್ದರು.
ಸದಸ್ಯರುಗಳ ನಡುವೆ ಅಭಿಯಂತರರನ್ನು ಸಿಕ್ಕಿಸುವ ಅಧ್ಯಕ್ಷರ ಪ್ರಯತ್ನಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ಕಸಿವಿಸಿಗೊಂಡ ಅಧ್ಯಕ್ಷರು ತಕ್ಷಣ ರೆಕಾರ್ಡರ್ನ್ನು ಬಂದ್ ಮಾಡಿ ತಮ್ಮ ವ್ಯಾನಿಟಿ ಬ್ಯಾಗ್ನೊಳಗೆ ಹಾಕಿಕೊಂಡರು.