ಸೋಮವಾರಪೇಟೆ, ಮಾ. 16: ಗ್ರಾಹಕರು ತಾವು ಖರೀದಿಸುವ ವಸ್ತುಗಳ ಗುಣಮಟ್ಟ, ತೂಕ ಮತ್ತು ಅಳತೆಯಲ್ಲಿ ಮೋಸ ಹೋದರೆ ಗ್ರಾಹಕರ ವೇದಿಕೆಗೆ ದೂರು ನೀಡಿ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ದೊಡ್ಡಮನಿ ಕರೆ ನೀಡಿದರು.ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ಆಶ್ರಯದಲ್ಲಿ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೂರು ನೀಡಿದ್ದಲ್ಲಿ, ಸಂಬಂಧಿಸಿ ದವರಿಂದ ನಷ್ಟಭರಿಸುವ ಅವಕಾಶ ವನ್ನು ಕಾನೂನಿನಲ್ಲಿ ಕಲ್ಪಿಸಲಾಗಿದೆ. ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ಯಾಂಪ್ರಕಾಶ್ ಮಾತನಾಡಿ, ಮನಸ್ಸಿನ ವ್ಯಾಕುಲತೆ ಯನ್ನು ಬದಿಗಿಟ್ಟು, ಆಕ್ರೋಶವನ್ನು ತಹಬದಿಗೆ ತಂದುಕೊಂಡರೆ ಕಾನೂನು ಬಾಹಿರ ಕೃತ್ಯಗಳು ಕಡಿಮೆಯಾಗುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಗ್ರಾಹಕರ ಶೋಷಣೆ ಪ್ರತಿನಿತ್ಯ ನಡೆಯುತ್ತಿದೆ. ಹೀಗಿದ್ದು ವಾರ್ಷಿಕ 25 ಲಕ್ಷ ಮಂದಿಗೆ ಓರ್ವರು ವೇದಿಕೆಗೆ ದೂರು ನೀಡುತ್ತಿದ್ದಾರೆ. ಗ್ರಾಹಕರು ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಮೋಸ ತಡೆಗಟ್ಟ ಬಹುದು ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ತಾಲೂಕು ತಹಶೀಲ್ದಾರ್ ಜಿ.ಎಸ್. ಕೃಷ್ಣ, ವಕೀಲ ಮನೋಹರ್, ಆಹಾರ ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ, ಶಿರಸ್ತೇದಾರ್ ರಾಜಣ್ಣ, ತಾಲೂಕು ಕಚೇರಿಯ ಅರುಣ್‍ಕುಮಾರ್ ಅವರುಗಳು ಉಪಸ್ಥಿತರಿದ್ದರು.