ಸಿದ್ದಾಪುರ, ಮಾ. 16: ಮಹಿಳೆಯರು ಅಭಿವೃದ್ಧಿಯ ಮೂಲ ಕಾರಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಭಿಮತ ವ್ಯಕ್ತಪಡಿಸಿದರು.
ಜಿಲ್ಲಾ ಓ.ಡಿ.ಪಿ. ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದ ಸೆಂಟನರಿ ಸಭಾಂಗಣದಲ್ಲಿ 107ನೇ ಅಂತರರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ದಾಟಿಸಿ ಮಾತನಾಡಿದ ಅವರು, ಮಹಿಳೆಯರು ಶೈಕ್ಷಣಿಕವಾಗಿ ಮುಂದಿದ್ದು ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡಿರುವದು ಶಾಘ್ಲನೀಯವಾಗಿದೆ ಎಂದರಲ್ಲದೆ ಸಮಾಜ ಸುಧಾರಣೆ ಆಗಲು ಮಹಿಳೆಯರ ಪಾತ್ರ ಮುಖ್ಯ. ಇತ್ತೀಚೆಗೆ ಎಲ್ಲಾ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಿರುವದು ಹೆಮ್ಮೆಯ ವಿಚಾರ ಎಂದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಹಾಗೂ ನಿವೃತ್ತ ಪಾಂಶುಪಾಲೆ ಡಾ. ಪುಷ್ಪ ಕುಟ್ಟಣ್ಣ ಮಾತನಾಡಿ, ಮಹಿಳೆಯರು ತಮ್ಮ ಶಕ್ತಿಯನ್ನು ಕ್ರೋಡೀಕರಿಸಬೇಕೆಂದು ಕರೆ ನೀಡಿದರು. ಮಹಿಳೆಯರಲ್ಲಿ ಅಗೋಚರದ ಶಕ್ತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತರ ಜಿಲ್ಲೆಯಲ್ಲಿ ಮಹಿಳೆಯರ ವಿರುದ್ಧ ಶೋಷಣೆಗಳು ನಡೆಯುತ್ತಿದೆ ಎಂದು ವಿಷಾಧಿಸಿದರು. ಪ್ರಾಸ್ತ್ತಾವಿಕವಾಗಿ ಮಾತನಾಡಿದ ಓ.ಡಿ.ಪಿ. ಸಂಸ್ಥೆಯ ಉಪ ನಿರ್ದೇಶಕರು ಹಾಗೂ ಧರ್ಮಗುರುಗಳಾದ ಜೋನಸ್ ಅವರು, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು. ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕು. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಡಬೇಕು ಎಂದು ಕರೆ ನೀಡಿದರು. ಸಮಾರಂಭದಲ್ಲಿ ನರ್ಬಾಡ್ ಬ್ಯಾಂಕಿನ ಮುಖ್ಯಸ್ಥ ಮುಂಡಂಡ ನಾಣಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ ಶಾರದರಾಮನ್ ಮಾತನಾಡಿದರು. ಇದೇ ಸಂದರ್ಭ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾರದಾರಾಮನ್, ಶೀಲ, ಸುನೀತಾ ಅವರುಗಳನ್ನು ಸನ್ಮಾನಿಸಲಾಯಿತು. ಅತಿಥಿಗಳನ್ನು ಮಹಿಳೆಯರು ಚಂಡೆ ಬಾರಿಸುವ ಮೂಲಕ ಸ್ವಾಗತಿಸಿ, ಬರಮಾಡಿಕೊಂಡರು. ವಿವಿಧೆಡೆಗಳಿಂದ ಸಾವಿರಾರು ಮಂದಿ ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದರು. ಜಿಲ್ಲಾ ಓ.ಡಿ.ಪಿ. ಸಂಸ್ಥೆಯ ಸಂಯೋಜಕಿ ಜಾಯ್ಸ್ ಮೆನೇಜûಸ್ ಸ್ವಾಗತಿಸಿ, ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಓ.ಡಿ.ಪಿ. ಸಂಸ್ಥೆ ಅಲ್ಮೆಡಾ, ಧರ್ಮಗುರುಗಳಾದ ಪಿ. ಜೋನಸ್ ಹಾಗೂ ವಿವಿಧ ಗ್ರಾಮಗಳ ಜನಪ್ರತಿನಿಧಿಗಳು ಹಾಜರಿದ್ದರು. ಕಾರ್ಯಕ್ರಮ ಮುಂಚಿತ ಮಹಿಳೆಯರು ತಯಾರಿಸಿದ ವಿವಿಧ ಸಾಮಗ್ರಿಗಳ ಮಾರಾಟದ ಮಳಿಗೆಗಳನ್ನು ಜಿಲ್ಲಾಧಿಕಾರಿ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಉದ್ಘಾಟಿಸಿದರು. ಕೊನೆಯಲ್ಲಿ ಕೊಡಗಿನ ವಾದ್ಯ ಹಿಮ್ಮೇಳಕ್ಕೆ ವನಿತೆಯರು ಕುಣಿದು ಕುಪ್ಪಳಿಸಿ ಮನೋಲ್ಲಾಸ ಹಂಚಿಕೊಂಡರು.
- ಎ.ಎನ್. ವಾಸು