ಕುಶಾಲನಗರ, ಮಾ. 16: ಕುಶಾಲನಗರವನ್ನು ಪ್ರತ್ಯೇಕ ತಾಲೂಕು ಮಾಡಬೇಕೆಂದು ಆಗ್ರಹಿಸಿ ಕಾವೇರಿ ತಾಲೂಕು ಹೋರಾಟ ಸಮಿತಿ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕಾವೇರಿ ತಾಲೂಕು ಬೇಡಿಕೆಯೊಂದಿಗೆ ಕೆಲಕಾಲ ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿದರು. ಸೋಮವಾರ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ನಿರ್ಣಯಿಸಿದರು.

ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಕನ್ನಿಕಾ ಇಂಟರ್‍ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಬಜೆಟ್‍ನಲ್ಲಿ ಕಾವೇರಿ ತಾಲೂಕು ಘೋಷಣೆಯಾಗದ ಹಿನೆÀ್ನಲೆ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಿದ್ದರೂ ಕೂಡ ಕುಶಾಲನಗರವನ್ನು ತಾಲೂಕಾಗಿ ಘೋಷಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಭೆಯಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳುವ ಮೂಲಕ ಈ ಆಂದೋಲನಕ್ಕೆ ಮರುಜೀವ ಕಲ್ಪಿಸಬೇಕೆಂದು ಆಗ್ರಹಿಸಿದರು.

ಹೊಸ ಪಟ್ಟಿಯಲ್ಲಿ ಕುಶಾಲನಗರವನ್ನು ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಸಭೆಯಲ್ಲಿ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು ಮತ್ತಿತರರು ಆಗ್ರಹಿಸಿದರು. ಕೆಲವರು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮತ್ತೊಮ್ಮೆ ಆಗ್ರಹಿಸಿ ಮುಂದಿನ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಿ ಪ್ರತಿಭಟನೆ ನಡೆಸುವಂತೆ ಸಲಹೆ ನೀಡಿದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ಕರಿಯಪ್ಪ, ನಂಜುಂಡಸ್ವಾಮಿ, ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮತ್ತಿತರರು ಸಲಹೆ ನೀಡಿದರು.

‘ಕುಡಾ’ ಅಧ್ಯಕ್ಷ ಬಿ.ಜಿ. ಮಂಜುನಾಥ್ ಮಾತನಾಡಿ, ಕಾರ್ಯಕ್ರಮ ನಿಮಿತ್ತ ಶನಿವಾರ ಶಾಂತಳ್ಳಿಗೆ ಸಚಿವರಾದ ಎಂ.ಆರ್.ಸೀತಾರಾಂ, ಸಂಸದ ಪ್ರತಾಪ್ ಸಿಂಹ ಆಗಮಿಸುತ್ತಿದ್ದು ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯಲು ಆಗ್ರಹಿಸಿ ಮನವಿ ಸಲ್ಲಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಶನಿವಾರ ಕುಶಾಲನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಚಿವರ ಹಾಗೂ ಸಂಸದರ ಗಮನ ಸೆಳೆಯಲು ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿಗಳ ಬಳಿಗೆ ಕನಿಷ್ಠ 100 ಮಂದಿಯನ್ನು ಒಳಗೊಂಡ ನಿಯೋಗ ತೆರಳಲು ಸಭೆ ನಿರ್ಣಯ ಕೈಗೊಂಡಿತು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಶ್ರೀನಿವಾಸ್, ಸುನಿತಾ, ಮಂಜುಳಾ, ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಪಾರ್ವತಿ, ರಶ್ಮಿ ಅಮೃತ್, ರೇಣುಕಾ, ಬಿಜೆಪಿ ಪ್ರಮುಖರಾದ ಎಂ.ಎನ್.ಕುಮಾರಪ್ಪ, ಎಂ.ಡಿ.ಕೃಷ್ಣಪ್ಪ, ಭಾಸ್ಕರ್ ನಾಯಕ್, ಕಾಂಗ್ರೆಸ್ ಪ್ರಮುಖರಾದ ಕೆ.ಕೆ. ಮಂಜುನಾಥ್‍ಕುಮಾರ್, ಪುಷ್ಪಲತಾ ಸೇರಿದಂತೆ ಸಂಘಸಂಸ್ಥೆಗಳ ಪ್ರಮುಖರು ಇದ್ದರು.