ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮಘಟ್ಟದ ಜಲಮೂಲ, ಅರಣ್ಯಸಂಪತ್ತು ಮತ್ತು ಅಪಾರ ಸಂಖ್ಯೆಯ ವನ್ಯಜೀವಿಗಳ ಸಂರಕ್ಷಣೆಯ ಉದ್ದೇಶದ ಈಡೇರಿಕೆಗಾಗಿ 6 ರಾಜ್ಯಗಳ ಕೆಲವು ಹಸಿರು ಪ್ರದೇಶಗಳನ್ನು “ಪರಿಸರ ಸೂಕ್ಷ್ಮ ವಲಯ’’ವೆಂದು ಘೋಷಿಸಲು ಸಿದ್ಧತೆ ನಡೆಸಿದೆ. ಅದನ್ನು ಜಾರಿಗೊಳಿಸುವ ಸಂಬಂಧ ಕೇಂದ್ರವು ಫೆಬ್ರವರಿ 27 ರಂದು 3ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಅದರೊಂದಿಗೆ ಬಾಧಿತ ಪ್ರದೇಶಗಳ ಸಾರ್ವಜನಿಕರು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಮುಂದಿನ ತಿಂಗಳು ಏಪ್ರಿಲ್ 28 ರವರೆಗೆ ಮಾತ್ರ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ 6 ರಾಜ್ಯಗಳ ಅರಣ್ಯ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಹಸಿರು ಪ್ರದೇಶದ ಜನರ ಮೇಲೆ ಪರಿಣಾಮ ಬೀರಲಿದೆ. ಕಳೆದೆರಡು ಕರಡು ಅಧಿಸೂಚನೆ ಹೊರಡಿಸಿದ ಸಂದÀರ್ಭ ಕರ್ನಾಟಕ ಸರಕಾರ ಕೇಂದ್ರಕ್ಕೆ ಸೂಕ್ತ ರೀತಿಯಲ್ಲಿ ಆಕ್ಷೇಪಣೆ ಸಲ್ಲಿಸುವಲ್ಲಿ ಎಡವಿದ್ದು, ಪಕ್ಕದ ಕೇರಳ ಸರಕಾರ ತನ್ನ ಸಮರ್ಥ ಆಕ್ಷೇಪಣೆ ಸಲ್ಲಿಸುವ ಮೂಲಕ 13 ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯಿದ್ದ ಪರಿಸರ ಸೂಕ್ಷ್ಮ ಪ್ರದೇಶವನ್ನು 9 ಸಾವಿರ ಕಿಲೋಮೀಟರ್‍ಗಳಿಗೆ ಕಡಿಮೆ ಮಾಡಿಸಿಕೊಂಡಿದೆ. ಈಗಾಗಲೆ ಸುಮಾರು ನಾಲ್ಕುವರೆ ಸಾವಿರದಷ್ಟು ಜನಾಭಿಪ್ರಾಯದ ಅರ್ಜಿಗಳು ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ರಾಜ್ಯ ಸರಕಾರ ಸಮರ್ಥವಾಗಿ ಪ್ರಕರಣವನ್ನು ನಿಭಾಯಿಸದೆ ಮತ್ತೆ ಸಮಸ್ಯೆ ತಂದಿಟ್ಟಿದೆ.

ಕಸ್ತೂರಿ ರಂಗನ್ ವರದಿಯಲ್ಲಿನ ಅಂಶಗಳು ಯಥಾವತ್ ಅನುಷ್ಠಾನಗೊಂಡರೆ... ಆ ವ್ಯಾಪ್ತಿಯಲ್ಲಿ ನೂತನವಾಗಿ ರಸ್ತೆ ನಿರ್ಮಾಣ ದುರಸ್ಥಿಗಳು ನಡೆಯುವಂತಿಲ್ಲ. ನಿಗದಿತ ಅಳತೆಗಿಂತ ದೊಡ್ಡ ಮನೆ ಕಟ್ಟುವಂತಿಲ್ಲ. ನೂತನವಾಗಿ ಕಟ್ಟಡ ಕಾರ್ಖನೆಗಳು ನಿರ್ಮಿಸುವಂತಿಲ್ಲ. ಯಾವದೇ ಹೊಸ ಅಭಿವೃದ್ದಿ ಯೋಜನೆಗಳು ನಡೆಯುವಂತಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಮೀಸಲು ಅರಣ್ಯದ ಬಹುತೇಕ ಎಲ್ಲಾ ನಿಯಮಾವಳಿಗಳು ಪರಿಸರ ಸೂಕ್ಷ್ಮ ಪ್ರದೇಶದ ಒಂದು ಕಿ.ಮಿ. ವ್ಯಾಪ್ತಿವರೆಗೂ ಅನ್ವಯವಾಗುತ್ತದೆ. ಇದರಿಂದ ಸ್ಥಳೀಯ ಜನರಿಗೆ, ರೈತರಿಗೆ, ಅರಣ್ಯವಾಸಿಗಳಿಗೆ , ಬುಡಕಟ್ಟು ಜನರಿಗೆ ತೊಂದರೆಯಾಗಲಿದೆ. ಆ ವ್ಯಾಪ್ತಿಯೊಳಗಿನ ರೈತರು ತಮ್ಮ ಭೂಮಿಯ ಮೇಲಿನ ನಿಯಂತ್ರಣವನ್ನು ಸರಕಾರದ ಮಾರ್ಗಸೂಚಿಯಂತೆ ಮಾಡಬೇಕಾಗುತ್ತದೆ. ಪರಿಸರ ಸೂಕ್ಷ್ಮವಲಯದಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಸಾಧ್ಯವೇ ಇಲ್ಲ. ವಾಣಿಜ್ಯ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಜಲವಿದ್ಯುತ್ , ಘನತ್ಯಾಜ್ಯ ವಿಲೆವಾರಿಗೆ ಅವಕಾಶವೇ ಇರುವುದಿಲ್ಲ. ಬೆಟ್ಟದಲ್ಲಿ ನಡೆಸುವ ಹೋಂ ಸ್ಟೇ ರೆಸಾರ್ಟ್‍ಗಳಿಗೂ ಅವಕಾಶವಿಲ್ಲ. ಇಂಥಹ ಹಲವು ನಿಬಂಧನೆಗಳಿರುವದರಿಂದ ಜನ ಸಂಕಷ್ಟ ಎದುರಿಸುವುದು ನಿಶ್ಚಿತ. ಸರಿಯಾದ ಆಕ್ಷೇಪಣೆ ಸಲ್ಲಿಸುವದು ಮತ್ತು ಕೇಂದ್ರಕ್ಕೆ ವಾಸ್ತವತೆಯನ್ನು ಮನದಟ್ಟು ಮಾಡಬೇಕಿರುವುದೊಂದೇ ಸಮಸ್ಯೆ ಪರಿಹಾರಕ್ಕಿರುವ ಮಾರ್ಗ. ಅಂತಿಮವಾಗಿ ಸಂಘಟಿತ ಜಲ್ಲಿಕಟ್ಟು ಮಾದರಿಯ ಹೋರಾಟ ಮತ್ತು ನ್ಯಾಯಾಲಯದ ಮೆಟ್ಟಿಲೇರಬಹುದು. ಇದಕ್ಕೆ ಸಂಬಂಧಿಸಿದಂತೆ ಕಾರಣವೆಂಬುವದು ಅವರ ವಾದ. ಇತ್ತೀಚಿನ ದಿನಗಳಲ್ಲಿ ಮಿತಿಮೀರಿ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಾದ ಹೋಂ ಸ್ಟೇ ರೆಸಾರ್ಟ್ ನಿರ್ಮಾಣ, ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಭೂಪರಿವರ್ತನೆ ಮಾಡುತ್ತಿರುವದು ಹಾಗೂ ಟಿಂಬರ್ ಲಾಭಿಯಿಂದಾಗಿ ಬಹುತೇಕ ಪರಿಸರ ನಾಶವಾಗಿದೆ ಎಂಬವದು ಪರಿಸರ ಪ್ರೇಮಿಗಳ ವಾದ. ಪರಿಸರ ಸೂಕ್ಷ್ಮ ವಲಯಗಳಲ್ಲಿ ಯಾವುದೇ ಕೃಷಿ ಚಟುವಟಿಕೆಗಳಿಗೆ ಮತ್ತು ದೈನಂದಿನ ಜೀವನಕ್ಕೆ ತೊಂದರೆ ಇರುವುದಿಲ್ಲ ಎಂಬವದು ಅರಣ್ಯ ಇಲಾಖೆಯ ಸಮರ್ಥನೆ. ಅಧಿಸೂಚನೆಯ ಕರಡು ಪ್ರತಿಯನ್ನು ಕನ್ನಡ ಭಾಷೆಗೆ ಅನುವಾದಿಸಿ ಸ್ಥಳೀಯ ಜನರಿಗೆ ನೀಡುವುದರಿಂದ ಎಲ್ಲರೂ ವಾಸ್ತವತೆ ಅರಿತು ಸಮಸ್ಯೆ ಪರಿಹಾರವಾಗಲಿದೆ ಎಂಬವದೂ ಮತ್ತು ಕೆಲವು ರಾಜಕಾರಣಿಗಳು ಪ್ರಚಾರ ಗಿಟ್ಟಿಸುವದಕ್ಕಾಗಿ ಜನರಿಗೆ ವಾಸ್ತವತೆಯನ್ನು ಮನವರಿಕೆ ಮಾಡದೆ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡುತ್ತಿದ್ದಾರೆಂಬವದು ಪರಿಸರವಾದಿಗಳ ಸಮರ್ಥನೆ. ಏನೇ ಇರಲಿ ಸ್ಥಳೀಯ ಜನರು ಈ ಬಗ್ಗೆ ತುರ್ತಾಗಿ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಕೇಂದ್ರ ನಾಯಕರಿಗೂ ಈ ಬಗ್ಗೆ ಮನವರಿಕೆ ಮಾಡುವವರಿದ್ದೇವೆ. ನಂತರ ಚಿಂತಿಸಿ ಫಲವಿಲ್ಲ. ಎಂಬದು ನಮಗೆಲ್ಲರಿಗೂ ತಿಳಿದಿರಲೇ ಬೇಕಲ್ಲವೇ...?

ಈ ನಿಟ್ಟಿನಲ್ಲಿ ಕೊಡಗಿನ ಜನತೆ ಸೂಕ್ಷ್ಮ ಪರಿಸರ ವಲಯದಿಂದ ಆಗಬಹುದಾದ ಪರಿಣಾಮದ ಕುರಿತು ಎಚ್ಚೆತ್ತುಕೊಂಡು ‘ತೂಗುಕತ್ತಿ’ಯಿಂದ ಪಾರಾಗಬೇಕಿದೆ.

- ಶಾಂತೆಯಂಡ ರವಿಕುಶಾಲಪ್ಪ