ಶನಿವಾರಸಂತೆ, ಮಾ. 16: ಶನಿವಾರಸಂತೆ ಪಟ್ಟಣಕ್ಕೆ ಸ್ವಾಗತ ಪ್ರದೇಶ ಹಾಗೂ ಸರಕಾರಿ ಆಸ್ಪತ್ರೆಯ ಬಳಿ ಪಂಚಾಯಿತಿ ವತಿಯಿಂದ ಕಸ ಹಾಕುತ್ತಿರುವ ಬಗ್ಗೆ ತಾ. 18ರಂದು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ಘಟಕ ಮತ್ತು ಶನಿವಾರಸಂತೆ ಹೋಬಳಿ ಘಟಕ, ಸರಕಾರಿ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಪೋಷಕರು, ಉರ್ದು ಶಾಲಾ ಆಡಳಿತ ಮಂಡಳಿಯಿಂದ ಪ್ರತಿಭಟನೆಯ ರ್ಯಾಲಿಯೊಂದಿಗೆ ಕಂದಾಯ ಇಲಾಖೆ ಎದುರು ಅಹೋ ರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಕ್ಷಣಾ ವೇದಿಕೆ ಅಧ್ಯಕ್ಷ ಒ.ವಿ. ಫ್ರಾನ್ಸಿಸ್ ಡಿಸೋಜ, ಶನಿವಾರಸಂತೆ ಅಧ್ಯಕ್ಷ ಎನ್.ಡಿ. ಆನಂದ್ ತಿಳಿಸಿದ್ದಾರೆ.
ಖಂಡನೆ: ಶನಿವಾರಸಂತೆ ನಾಡ ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿಸಿ ತಾ. 18 ರಂದು ಕರ್ನಾಟಕ ರೈತ ಸಂಘ ಶನಿವಾರಸಂತೆ ಹೋಬಳಿ ಶಾಖೆ ನಡೆಸುತ್ತಿರುವ ಪ್ರತಿಭಟನಾ ಧರಣಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸಿದೆ.
ಶನಿವಾರಸಂತೆ ನಾಡಕಛೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿರೋಧಿಸಿ ಕರ್ನಾಟಕ ರೈತ ಸಂಘ ಹೋಬಳಿ ಶಾಖೆ ಕರಪತ್ರ ಹೊರಡಿಸಿದೆÉ. ಆದರೆ ಶನಿವಾರಸಂತೆ ನಾಡಕಛೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುವದಕ್ಕೆ ಯಾವದೇ ದಾಖಲೆಗಳಿರುವದಿಲ್ಲ. ಶನಿವಾರಸಂತೆ ಹೋಬಳಿಯಲ್ಲಿ ಸಾಕಷ್ಟು ಮೀಸಲು ಅರಣ್ಯ, ಹುಲ್ಲುಗಾವಲು, ಊರುಡವೆ ಜಾಗಗಳು ಆಗಿದ್ದು, ಯಾವದೇ ಜಾಗಗಳು ಅಕ್ರಮ ಸಕ್ರಮ ಗೊಳಿಸಲು ಬರುವದಿಲ್ಲ ಮನೆ ನಿವೇಶನ ಜಾಗವು ನಿಬಂಧನೆಗೆ ಒಳಪಟ್ಟ ಜಾಗ ಆಗಿರುವದರಿಂದ ಕೇವಲ ಸಾರ್ವಜನಿಕರಿಗೆ ಹಕ್ಕು ಪತ್ರ ಪಡೆಯಲು ಕಾನೂನಿನಲ್ಲಿ ಸಾಧ್ಯವಾಗಿರುವದಿಲ್ಲ. ಯಾರಿಗೆ ತೊಂದರೆಯಾಗಿದೆ ಎಂದು ಮೇಲಾಧಿಕಾರಿಗಳ ಗಮನಕ್ಕೆ ಲಿಖಿತವಾಗಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ವಿನಃ ಈ ಕರಪತ್ರದಲ್ಲಿ ಯಾವ ವ್ಯಕ್ತಿಗೆ ಅನ್ಯಾಯವಾಗಿದೆ ಎಂದು ಉಲ್ಲೇಖ ಇರುವದಿಲ್ಲ. ಕೆಲವು ಮುಖಂಡರುಗಳಿಗೆ ಕಾನೂನು ಬಾಹಿರ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಧರಣಿ ನಡೆಸಲು ಮುಂದಾಗಿರುತ್ತಾರೆ. ಕೆಳ ಹಂತದ ಅಧಿಕಾರಿಗಳು ಯಾವದೇ ರೀತಿಯ ಕಡುಬಡವರ ಕೆಲಸಗಳನ್ನು ತಡೆಹಿಡಿದಿರುವದಿಲ್ಲ. ಕೆಲವು ಮುಖಂಡರುಗಳು ಮಾಡುತ್ತಿರುವ ಹುನ್ನಾರ ಇದಾಗಿದೆ. ಈ ಪ್ರತಿಭಟನಾ ಧರಣಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಜೆ. ಈರಪ್ಪ, ಹೋಬಳಿ ಶಾಖೆ ಶನಿವಾರಸಂತೆ ಹಾಗೂ ದಲಿತ ಸಂಘಟನೆ ಸಮಿತಿ ಮುಖಂಡರು ಮತ್ತು ಸದಸ್ಯರುಗಳು ಖಂಡಿಸುವದಾಗಿ ಹೇಳಿಕೆ ನೀಡಿದ್ದಾರೆ. ಪ್ರಚಾರ ಪಡಿಸಿರುವ ಕರಪತ್ರದಲ್ಲಿ ಸಂಘ ನೊಂದಾವಣೆಯಾದ ಉಲ್ಲೇಖವಿರುವದಿಲ್ಲ, ಕಡುಬಡವರ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿರುವದು ಕಂಡು ಬಂದಿರುತ್ತದೆ ಎಂದು ಲಿಖಿತ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.