ಸೋಮವಾರಪೇಟೆ,ಮಾ.16: ಅಕ್ರಮವಾಗಿ ಮರಳನ್ನು ಸಾಗಾಟಗೊಳಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಸಿಲುಕಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಲಾರಿಯನ್ನು ಮೇಲೆತ್ತಿದ ನಂತರ ಲಾರಿಯೊಂದಿಗೆ ಚಾಲಕ ಎಸ್ಕೇಪ್ ಆಗಿರುವ ಘಟನೆ ಮಾದಾಪುರದಲ್ಲಿ ನಡೆದಿದೆ.
ಮೊನ್ನೆ ರಾತ್ರಿ ಅಕ್ರಮವಾಗಿ ಮರಳನ್ನು ಸಾಗಾಟಗೊಳಿಸುತ್ತಿದ್ದ ಕೇರಳ ನೋಂದಣಿಯ ಲಾರಿ (ಕೆ.ಎಲ್.58, ಇ. 0301) ಮಾದಾಪುರದ ಬಳಿ ನಿಯಂತ್ರಣ ತಪ್ಪಿ ಗುಂಡಿಗಿಳಿದಿದೆ. ಸಾರ್ವಜನಿಕರು ಸ್ಥಳಕ್ಕೆ ತೆರಳಿದ ಸಂದರ್ಭ ಅಕ್ರಮವಾಗಿ ಮರಳು ಸಾಗಾಟಗೊಳಿಸುತ್ತಿದ್ದುದು ಪತ್ತೆಯಾಗಿದೆ.
ಈ ಬಗ್ಗೆ ಮಾದಾಪುರ ಉಪ ಠಾಣೆಗೆ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕೆ ತೆರಳಿದ ಪೊಲೀಸ್ ಪೇದೆಯೋರ್ವರು ಮರಳನ್ನು ಅನ್ಲೋಡ್ ಮಾಡಿ ಲಾರಿಯನ್ನು ವಾಪಸ್ ಕಳುಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು ಅಕ್ರಮ ಮರಳು ಸಾಗಾಟಕ್ಕೆ ಪೊಲೀಸರೇ ಕುಮ್ಮಕ್ಕು ನೀಡುತ್ತಿರುವಂತಿದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭ ಪೊಲೀಸ್ ಪೇದೆ ಸೋಮವಾರಪೇಟೆಯ ಪೊಲೀಸ್ ಉಪ ನಿರೀಕ್ಷಕರಿಗೆ ಕರೆ ಮಾಡಿದ್ದು, ಲಾರಿಯನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸುವಂತೆ ಸೂಚಿಸಿದ್ದಾರೆ.
ಅಕ್ರಮ ಮರಳು ಸಾಗಾಟಗೊಳಿಸುತ್ತಿದ್ದ ಲಾರಿಯನ್ನು ಸೋಮವಾರಪೇಟೆ ಠಾಣೆಗೆ ತರುವಂತೆ ಸೂಚಿಸಿದ್ದಾರೆ. ಇದನ್ನೇ ಬಳಸಿಕೊಂಡ ಲಾರಿ ಚಾಲಕ ಹ್ಯಾರೀಸ್ ಎಂಬಾತ ಸೋಮವಾರಪೇಟೆಗೆ ಲಾರಿಯನ್ನು ತೆಗೆದುಕೊಂದು ಹೋಗುವದಾಗಿ ತಿಳಿಸಿ ನಾಪತ್ತೆಯಾಗಿದ್ದಾನೆ. ಆರಕ್ಷಕರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಲಾರಿ ಚಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.