ಸಿದ್ದಾಪುರ, ಮಾ. 16: ಗ್ರಾಮೀಣ ಪ್ರದೇಶಗಳಲ್ಲಿನ ಕ್ರೀಡಾ ಪ್ರತಿಭೆಗಳನ್ನು ಮುಖ್ಯ ವೇದಿಕೆಗೆ ತರಲು ಪ್ರಯತ್ನಿಸುವ ಯುವಕ ಸಂಘಗಳಿಗೆ ರಾಜ್ಯ ಸರಕಾರದಿಂದ ಸೂಕ್ತ ಅನುದಾನ ಕೊಡಿಸಲು ಕ್ರೀಡಾ ಮಂತ್ರಿಗಳ ಮುಖಾಂತರ ಪ್ರಯತ್ನಿಸುವದಾಗಿ ರಾಜ್ಯ ಅರಣ್ಯ ನಿಗಮ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಭರವಸೆ ನೀಡಿದರು.ಪಟ್ಟಣದ ಪ್ಲಾಟಿನಂ ಪ್ಲಾಜಾ ಸಭಾಂಗಣದಲ್ಲಿ ಸಿಟಿ ಬಾಯ್ಸ್ ಯುವಕ ಸಂಘ ಆಯೋಜಿಸುವ ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಎರಡನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಯುವಕ ಸಂಘಗಳಿಂದ ಮಾತ್ರ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಪ್ರಾಮಾಣಿಕ ಕೆಲಸವಾಗುತ್ತಿದೆ. ರಾಷ್ಟ್ರೀಯ ಹಾಕಿ, ಕ್ರಿಕೆಟ್, ಕಬಡ್ಡಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ತಂಡಗಳಲ್ಲೂ ಕೊಡಗಿನ ಕ್ರೀಡಾ ಪಟುಗಳು ಗುರುತಿಸಿಕೊಂಡಿದ್ದು, ಕೊಡಗು ರಾಜ್ಯದ ಗ್ರಾಮೀಣ ಕ್ರೀಡೆಗಳ ತವರೂರು ಎಂಬ ಪ್ರಖ್ಯಾತಿಗೆ ಪಾತ್ರವಾಗಿದೆ.

ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಫ್ರಾಂಚೈಸಿಗಳು ಹರಾಜು ಮುಖಾಂತರ ತಲಾ ಇಬ್ಬರಂತೆ ಐಕಾನ್ ಆಟಗಾರರನ್ನು ಖರೀದಿ ಮಾಡಿದರು. ಇದೇ ತಿಂಗಳು 21 ರಂದು ಇನ್ನುಳಿದ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಬಾರಿಯ ಕೆಸಿಎಲ್ ಉತ್ಸವದಲ್ಲಿ ಕ್ರೀಡಾ ಕೂಟಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದು ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎ ಅಜೀಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹ್ಯಾರಿಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾ.ಪಂ. ಸದಸ್ಯರಾದ ಎಂ.ಎಂ ಶೌಕತ್ ಆಲಿ, ಎ.ಎಸ್ ಹುಸೈನ್, ಕೆ.ಕೆ ರೆಜಿತ್ ಕುಮಾರ್, ತಾ.ಪಂ. ಮಾಜಿ ಸದಸ್ಯ ಎಂ ಬಿಜೋಯ್, ಮಾಜಿ ಗ್ರಾ.ಪಂ. ಸದಸ್ಯ ಎಸ್.ಬಿ. ಪ್ರತೀಶ್, ಕೂರ್ಗ್ ಫ್ರೆಸ್ಕೋ ಸಂಸ್ಥೆಯ ವ್ಯವಸ್ಥಾಪಕ ಸೈಫುದ್ಧೀನ್ ಇದ್ದರು.