ವೀರಾಜಪೇಟೆ, ಮಾ. 16 : ವೀರಾಜಪೇಟೆ ತಾಲೂಕಿನ ಬಾಳೆಲೆಯ ನಿಟ್ಟೂರು ಗ್ರಾಮದಲ್ಲಿ ಆಸ್ತಿ ಹೊಂದಿರುವ ವಿಧವೆ ಮಹಿಳೆ ಎಂ.ಎನ್. ಕಮಲಾಕ್ಷಿ ಕುಟುಂಬಕ್ಕೆ ಪೊನ್ನಂಪೇಟೆ ಸಬ್ ಇನ್ಸ್‍ಪೆಕ್ಟರ್ ರಕ್ಷಣೆ ಕೊಡಲು ಹಿಂದೇಟು ಹಾಕುತ್ತಿದ್ದು, ಇವರ ವಿರುದ್ಧ ಇಲಾಖೆಯ ಉನ್ನತಾಧಿಕಾರಿ ಹಾಗೂ ಪೊನ್ನಂಪೇಟೆ ನ್ಯಾಯಾಲಯಕ್ಕೆ ದೂರು ನೀಡಲಾಗುವದು ಎಂದು ತಾಲೂಕು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕೇಚಂಡ ಕುಶಾಲಪ್ಪ ತಿಳಿಸಿದ್ದಾರೆ.

ನಿಟ್ಟೂರು ಗ್ರಾಮದಲ್ಲಿ ಕಮಲಾಕ್ಷಿಗೆ ಪಾರಂಪರ್ಯವಾಗಿ ಬಂದ ಕಾಫಿ ತೋಟ ಹೊಂದಿದ್ದು, ಆಸ್ತಿಯ ಸ್ವಾಧೀನ ಹಾಗೂ ದಾಖಲೆ ಇವರ ಹೆಸರಿನಲ್ಲಿದ್ದರೂ ಇವರ ಇಬ್ಬರು ಸಂಬಂಧಿಕರು ಕಿರುಕುಳ ನೀಡುತ್ತಿದ್ದು, ಈಕೆ ವಾಸಿಸುವ ಮನೆಯನ್ನು ನೆಲಸಮ ಮಾಡಿದ್ದಾರೆ; ಜೊತೆಗೆ ಆಗಿಂದಾಗ್ಗೆ ಬೆದರಿಕೆ ಒಡ್ಡುತ್ತಿದ್ದು ಪೊನ್ನಂಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಜಯರಾಂ ಕಮಲಾಕ್ಷಿಗೆ ರಕ್ಷಣೆ ನೀಡದೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಕೀಲ ಸಿ.ಕೆ. ಪೂವಣ್ಣ ಮಾತನಾಡಿ, ಜಯರಾಂ ಯಾವದೇ ದೂರು ನೀಡಿದರೆ ದಾಖಲಿಸುತ್ತಿಲ್ಲ. ವಿರುದ್ಧ ತಂಡದವರಿಗೆ ಜಯರಾಂ ರಕ್ಷಣೆ ನೀಡಿ ಸುಮಾರು 200 ಚೀಲಗಳಷ್ಟು ಕಾಫಿ ಹಾಗೂ 6 ಕ್ವಿಂಟಾಲ್‍ಗಳಷ್ಟು ಕರಿಮೆಣಸನ್ನು ಕುÀಯ್ಯುಲು ಮಾಡಲು ಅವಕಾಶ ನೀಡಿರುವದು ಸರಿಯಲ್ಲ. ಸಬ್ ಇನ್ಸ್‍ಪೆಕ್ಟರ್ ಜಯರಾಂ, ಇತರ ಮೂರು ಮಂದಿ ಮೇಲೆ ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಎಂ.ಬಿ. ಲೋಕೇಶ್, ಬಿ.ಬಿ.ಮಾಚಯ್ಯ, ಬಿ.ಕಾಳಪ್ಪ, ಕೊಕ್ಕಂಡ ಎಂ ಕಾವೇರಪ್ಪ, ಕುವಲೇರ ಹಂಸ, ಕಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.