ಸೋಮವಾರಪೇಟೆ, ಮಾ. 17: ತಾಲೂಕಿನ ಮಾದಾಪುರದಲ್ಲಿರುವ ತೋಟಗಾರಿಕಾ ಕ್ಷೇತ್ರ ಇಲಿ- ಹೆಗ್ಗಣಗಳ ಆಗರವಾಗಿ ಮಾರ್ಪಟ್ಟು, ರೈತರು ಹಾಗೂ ಕೃಷಿಕರ ಉಪಯೋಗಕ್ಕೆ ಅಯೋಗ್ಯವಾಗಿದ್ದ ಹಿನ್ನೆಲೆ ಈ ಬಗ್ಗೆ ವಿಧಾನ ಸಭೆಯಲ್ಲಿ ಗಮನ ಸೆಳೆದ ಶಾಸಕ ರಂಜನ್ ಅವರ ಪ್ರಯತ್ನದ ಫಲವಾಗಿ ಸರ್ಕಾರದಿಂದ ರೂ.1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ರಂಜನ್ ಪರಿಶೀಲಿಸಿದರು.

ಈ ಬಗ್ಗೆ ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ತಾನು ಸಂಬಂಧಿಸಿದ ಇಲಾಖಾ ಸಚಿವರ ಗಮನ ಸೆಳೆದ ಪರಿಣಾಮ ಕ್ಷೇತ್ರದ ಪುನಶ್ಚೇತನಕ್ಕೆ ರೂ. 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕ ರಂಜನ್ ತಿಳಿಸಿದರು.

ನಿರ್ವಹಣೆಯಿಲ್ಲದೆ ಪಾಳುಬಿದ್ದಿದ್ದ ತೋಟಗಾರಿಕಾ ಕ್ಷೇತ್ರದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸುವದು, ರೈತರಿಗೆ, ಕೃಷಿಕರಿಗೆ ಅನುಕೂಲವಾಗುವಂತೆ ವಿವಿಧ ತಳಿಯ ಗಿಡಗಳನ್ನು ಬೆಳೆಸುವದು, 50 ಎಕರೆ ಪ್ರದೇಶದಲ್ಲಿ ಸಪೋಟ ತೋಟ ಬೆಳೆಸುವದು, ರಾಜ್ಯದಲ್ಲಿಯೇ ಮಾದರಿ ತೋಟಗಾರಿಕಾ ಕ್ಷೇತ್ರವಾಗಿ ಪರಿವರ್ತಿಸಿ, ರೈತರಿಗೆ ತರಬೇತಿ ಒದಗಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಶಾಸಕರು ಮಾಹಿತಿ ನೀಡಿದರು.

ವಿಯೆಟ್ನಾಂ ಮಾದರಿಯಲ್ಲಿ ಸ್ಥಳೀಯವಾಗಿ ಕಾಳು ಮೆಣಸು ಬಳ್ಳಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಂಶೋಧನೆ ನಡೆಸಲು ಈ ಕ್ಷೇತ್ರದಲ್ಲಿ ಅವಕಾಶವಿದ್ದು, ಈ ಬಗ್ಗೆಯೂ ಗಮನಹರಿಸುವಂತೆ ಸೂಚಿಸಲಾಗಿದೆ. ಪಾಲಿಹೌಸ್ ಮೂಲಕ ಲಕ್ಷಾಂತರ ಗಿಡಗಳನ್ನು ಬೆಳೆಸಿ ರೈತರಿಗೆ ನೀಡುವ ಬಗ್ಗೆಯೂ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಆರ್.ಕೆ.ವಿ.ವೈ. ಯೋಜನೆಯಡಿ ಟೆಕ್ನಾಲಜಿ ಪಾರ್ಕ್ ನಿರ್ಮಿಸುವ ಯೋಜನೆಯಿದ್ದು, 35 ಎಕರೆ ವಿಸ್ತೀರ್ಣದಲ್ಲಿ ಕಾಳುಮೆಣಸು, ಕೊಡಗಿನ ಕಿತ್ತಳೆ, ಪ್ರಧಾನ ಹಣ್ಣುಗಳಾದ ದುರಿಮಾನ್, ಕರೋಂಡ, ಲಿಚ್ಚಿ, ರಾಮಂಭೂತನ್, ಮ್ಯಾಂಗೋಜಿನ್ ಗಿಡಗಳನ್ನು ನಾಟಿ ಮಾಡಲು ಹಾಗೂ ಹಸಿರುಮನೆಯಲ್ಲಿ ಆಂಥೋರಿಯಂ ಬೆಳೆಯಲು ಎಲ್ಲಾ ಭೂ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸರ್ಕಾರದಿಂದ ಈಗಾಗಲೇ ರೂ. 76.29 ಲಕ್ಷ ಹಣ ಬಿಡುಗಡೆಯಾಗಿದೆ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ವರದರಾಜ್ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲತಾ, ಸದಸ್ಯ ಮಜೀದ್, ಉಮೇಶ್, ಪ್ರಮುಖ ರತೀಶ್, ಸಹಾಯಕ ತೋಟಗಾರಿಕಾ ಅಧಿಕಾರಿ ಮದರಖಂಡಿ, ಸಹಾಯಕ ಚೇತನ್, ತಿಲಕ್‍ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.