ಸೋಮವಾರಪೇಟೆ, ಮಾ. 17: ತಾಲೂಕಿನ ಗೋಣಿಮರೂರು, ಅಬ್ಬೂರುಕಟ್ಟೆ, ಮೋರಿಕಲ್ಲು, ಆಡಿನಾಡೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಎರಡು ಪುಂಡಾನೆಗಳಿಂದಾಗಿ ಆನೆ-ಮಾನವ ಸಂಘರ್ಷ ಮಿತಿಮೀರಿದ್ದು, ಫಸಲು ನಷ್ಟದೊಂದಿಗೆ ಸ್ಥಳೀಯರು ಜೀವ ಕೈಯಲ್ಲಿಡಿದು ನಡೆದಾಡಬೇಕಿದೆ. ಈ ಹಿನ್ನೆಲೆ ಎರಡು ಪುಂಡಾನೆಗಳನ್ನು ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಬೆಳೆಗಾರರ ಸಂಘ ಹಾಗೂ ಸಾರ್ವಜನಿಕರು ಇಲಾಖೆಯ ಡಿಎಫ್‍ಓ ಅವರನ್ನು ಆಗ್ರಹಿಸಿದರು.
ಈ ಭಾಗದಲ್ಲಿ ಮಿತಿಮೀರಿರುವ ಕಾಡಾನೆಗಳ ಹಾವಳಿ ಬಗ್ಗೆ ತಾಲೂಕು ಬೆಳೆಗಾರರ ಹೋರಾಟ ಸಮಿತಿಯ ಪದಾಧಿಕಾರಿಗಳು ರಾಜ್ಯ ಅರಣ್ಯ ಸಚಿವರೂ ಸೇರಿದಂತೆ ಸಿಸಿಎಫ್ ಮನೋಜ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಆನೆ ಸ್ಥಳಾಂತರ ಸಂಬಂಧ ಸಚಿವರೇ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಡಿ.ಎಫ್.ಓ. ಸೂರ್ಯಸೇನ್ ತಿಳಿಸಿದರು. ಈ ಬಗ್ಗೆ ನೇರುಗಳಲೆ
(ಮೊದಲ ಪುಟದಿಂದ) ಹಾಗೂ ಗಣಗೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ವಿಶೇಷ ಸಭೆ ಕರೆದು ಆನೆಗಳನ್ನು ಸ್ಥಳಾಂತರ ಮಾಡುವ ನಿರ್ಣಯ ಅಂಗೀಕರಿಸಿ ಸಚಿವರಿಗೆ ತುರ್ತಾಗಿ ಕಳುಹಿಸಿಕೊಡಬೇಕೆಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ, ಗ್ರಾ.ಪಂ. ಸದಸ್ಯರುಗಳಿಗೆ ಮನವಿ ಮಾಡಿದರು.
ನಂತರ ಆನೆ ಹಾವಳಿ ಪೀಡಿತ ಪ್ರದೇಶಗಳಲ್ಲಿ 3 ಕಿ.ಮೀ.ಗೂ ಅಧಿಕ ದೂರ ಕಾಲ್ನಡಿಗೆಯಲ್ಲಿ ತೆರಳಿದ ಡಿಎಫ್‍ಓ ಸೂರ್ಯಸೇನ್ ಅವರು, ಈ ಹಿಂದೆ ನಿರ್ಮಿಸಲಾಗಿದ್ದ ಆನೆಕಂದಕವನ್ನು ವೀಕ್ಷಿಸಿದರು.
ಆನೆ ಹಾವಳಿಯಿಂದ ಮನೆಯಿಂದ ಹೊರಬರಲೂ ಕಷ್ಟವಾಗಿದೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಬೆಳೆಗಾರರು ಜೀವ ಭಯದಿಂದಲೇ ದಿನದೂಡಬೇಕಿದೆ ಎಂದು ಗ್ರಾಮದ ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ಗ್ರಾ.ಪಂ. ಸದಸ್ಯರುಗಳಾದ ವಿರೂಪಾಕ್ಷ, ಶಿವದಾಸ್ ಸೇರಿದಂತೆ ಇತರರು ಅಳಲು ತೋಡಿಕೊಂಡರು.
ಈ ವೇಳೆ ವಲಯಾಧಿಕಾರಿ ಮೊಹಿಸಿನ್ ಭಾಷ ಹಾಗೂ ಇತರರು ಹಾಜರಿದ್ದರು.