ಮಡಿಕೇರಿ, ಮಾ. 17: ಆಧುನಿಕತೆಯ ನಾಗಾಲೋಟದಲ್ಲಿ ಸಾಗುತ್ತಿರುವ ಜಗತ್ತಿನಲ್ಲಿ ಪ್ರಾಕೃತಿಕ ಅಸಮತೋಲನದಿಂದ ಹಿಡಿದು ಹವಾಮಾನ, ದಿನನಿತ್ಯದ ಚಟುವಟಿಕೆಗಳೂ ಕೂಡ ಏರುಪೇರಾಗುತ್ತಿದೆ. ಇದರೊಂದಿಗೆ ಜೀವನ ಶೈಲಿ, ದೇಹದ ಸ್ಥಿತಿ-ಗತಿ, ಆರೋಗ್ಯದಲ್ಲೂ ಕೆಟ್ಟ ಪರಿಣಾಮ ಕಂಡುಬರುತ್ತಿದೆ. ಹುಟ್ಟುವ ಮಗುವಿನಲ್ಲೇ ಮಧುಮೇಹ, ಹೆಚ್.ಐ.ವಿ., ಕ್ಯಾನ್ಸರ್, ರಕ್ತದೊತ್ತಡ ದಂತಹ ಜೀವನಪರ್ಯಂತ ಹಾಸುಹೊಕ್ಕಾಗುವ ಕಾಯಿಲೆಗಳು ಕಂಡುಬರುತ್ತಿವೆ. ಉಪಶಮನವಾಗದೆ, ಕೊನೆಯವರೆಗೂ ಔಷಧಿಯೊಂದಿಗೆ ಜೀವಿಸಬೇಕಾದಂತಹ ದುರ್ಗತಿ ಬಂದೊದಗಿದೆ. ಔಷಧಿಗಾಗಿಯೇ ದುಡಿಮೆಯ ಬಹುತೇಕ ಹಣವನ್ನು ವ್ಯಯಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಣವಿಲ್ಲದೆ ಅದೆಷ್ಟೋ ಬಡವರ್ಗದ ಮಂದಿ ಅರ್ಧದಲ್ಲೇ ತಮ್ಮ ಜೀವನದ ಪಯಣಕ್ಕೆ ಇತಿಶ್ರೀ ಹಾಡುತ್ತಿರುವದು ಸಾಮಾನ್ಯವಾಗಿದೆ.

ಆದರೆ.., ಇದೀಗ ಬಡವರ ಪಾಲಿಗೆ ವರದಾನವೆಂಬಂತೆ ಜನಸಂಜೀವಿನಿ ಯೋಜನೆ ಜಾರಿಗೆ ಬಂದಿದೆ. ಕಡಿಮೆ ದರದಲ್ಲಿ ಔಷಧಿಗಳು ದೊರಕುವ ಜೆನರಿಕ್ ಔಷಧಿ ಮಳಿಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆರಂಭವಾಗಲಿದ್ದು, ಕೊಡಗಿಗೂ ಈ ಮಳಿಗೆ ಬರುತ್ತಿದೆ. ಮಡಿಕೇರಿ ಹಾಗೂ ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ಜೆನರಿಕ್ ಔಷಧಿ ಕೇಂದ್ರ ಅತಿ ಶೀಘ್ರದಲ್ಲೇ ಆರಂಭವಾಗಲಿದೆ.

ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಔಷಧಿಗಳನ್ನು ಪೂರೈಸುವ ನಿಟ್ಟಿನಲ್ಲಿ ಜೆನರಿಕ್ ಔಷಧಿ ಮಳಿಗೆಗ ಳನ್ನು ಆರಂಭಿಸಲು ಆದೇಶಿಸಲಾಗಿದ್ದು, ಅದರಂತೆ ನಮ್ಮ ರಾಜ್ಯದಲ್ಲೂ ಈ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೇ ಮಂಗಳೂರು ಮುಂತಾದ ಮಹಾನಗರಗಳಲ್ಲಿ ಮಳಿಗೆಗಳು ಆರಂಭವಾಗಿದ್ದು, ಕೊಡಗು ಜಿಲ್ಲೆಯಲ್ಲಿ ಶೀಘ್ರದಲ್ಲಿ ಆರಂಭವಾಗಲಿದೆ.

ಈ ಸಂಬಂಧ ಹೈದರಾಬಾದ್‍ನ ಹೆಚ್.ಎಲ್.ಎಲ್. ಕಂಪೆನಿಗೆ ವಹಿಸಲಾಗಿದ್ದು,

(ಮೊದಲ ಪುಟದಿಂದ) ಕಂಪೆನಿಯವರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಸ್ಥಳ ಪರಿಶೀಲನೆ ಕೂಡ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಅಪಘಾತ ಘಟಕದ (ಕ್ಯಾಶ್ಯುವಲ್ಟಿ) ಬಳಿ ಔಷಧಿ ಮಳಿಗೆ ತೆರೆಯಲಾಗುತ್ತಿದೆ. ಹೆಚ್.ಎಲ್.ಎಲ್. ಸಂಸ್ಥೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ಸಚಿವಾಲಯದಿಂದ ಅನುಮೋದಿಸಲ್ಪಟ್ಟ ಔಷಧಿಗಳು ದೊರೆಯುತ್ತದೆ. ಮುಂದಿನ ಎರಡು ವಾರದೊಳಗೆ ಮಳಿಗೆ ಆರಂಭಿಸ ಲಾಗುವದೆಂದು ಹೆಚ್.ಎಲ್.ಎಲ್. ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಬನಾಲ ಅವರು ಮಾಹಿತಿ ನೀಡಿದರು.

ತಾಲೂಕು ಕೇಂದ್ರಗಳಲ್ಲಿ

ಜಿಲ್ಲಾಸ್ಪತ್ರೆ ಸೇರಿದಂತೆ ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಆರೋಗ್ಯ ಕೇಂದ್ರಗಳಲ್ಲೂ ಜೆನರಿಕ್ ಔಷಧಿ ಮಳಿಗೆಗಳನ್ನು ತೆರೆಯಲಾಗುವದು. ಈ ಸಂಬಂಧ ಕೆ.ಹೆಚ್.ಎಸ್. ಡಿ.ಆರ್.ಪಿ.ಯ ಇಂಜಿನಿಯರ್‍ಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅನುಮೋದನೆ ನೀಡಿದ್ದಾರೆ. ತಾಲೂಕು ಮಟ್ಟದಲ್ಲಿ ಎಂ.ಎಸ್.ಐ.ಎಲ್. ನವರಿಗೆ ಮಳಿಗೆ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶ್ರೀರಂಗಪ್ಪ ಮಾಹಿತಿ ನೀಡಿದರು.

ಜೆನರಿಕ್ ಔಷಧಿ ಮಳಿಗೆಯಿಂದ ಪ್ರತಿನಿತ್ಯ ಅವಶ್ಯವಿರುವ ಔಷಧಿಗಳೂ ಸೇರಿದಂತೆ ಇತರ ಅಗತ್ಯ ಔಷಧಿಗಳು ಕೂಡ ಅಗ್ಗದ ದರದಲ್ಲಿ ಲಭ್ಯವಾಗ ಲಿದೆ. ಇದರಿಂದಾಗಿ ಬಡವರ್ಗದ ಜನತೆಗೆ ಬಹಳಷ್ಟು ಲಾಭದಾಯಕ ಹಾಗೂ ಸಮಾಧಾನವಾಗಲಿದೆ.