ಸಿದ್ದಾಪುರ, ಮಾ. 17: ಮೀನು ಹಾಗೂ ಮಾಂಸ ಮಾರಾಟದ ಹರಾಜು ಪ್ರಕಿಯೆಗೆ ಸಂಬಂಧಪಟ್ಟಂತೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲು ಸಿದ್ದಾಪುರ ಗ್ರಾ.ಪಂ.ನಲ್ಲಿ ನಡೆದ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ. ಸಭಾಂಗಣದಲ್ಲಿ ಎಂ.ಕೆ. ಮಣಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾಂಸ ಹಾಗೂ ಮೀನು ಮಾರಾಟದ ವಿಚಾರವನ್ನು ಚರ್ಚಿಸಲಾಗಿ, 2017-18 ನೇ ಸಾಲಿನ ಮಾಂಸ ಮೀನು ಮಾರಾಟದ ಹಕ್ಕನ್ನು ಟೆಂಡರ್ ನೀಡಬೇಕೆಂದು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ. ಆದರೆ ಇದುವರೆಗೂ ಅನುಮೋದನೆಗೊಂಡಿಲ್ಲ. ಈ ಬಗ್ಗೆ ಸಿ.ಈ.ಓ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಇತ್ತೀಚೆಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಸಿದ್ದಾಪುರಕ್ಕೆ ಭೇಟಿ ನೀಡಿದ ಸಂದರ್ಭ ಮಾರುಕಟ್ಟೆಯಲ್ಲಿ ಎಲ್ಲ ಮೂಲಭೂತ ಸೌಕರ್ಯ ಒದಗಿಸಿರುವ ಬಗ್ಗೆ ಅಧ್ಯಕ್ಷರು ಹಾಗೂ ಪಿ.ಡಿ.ಓ. ಮಾಹಿತಿ ನೀಡಿದ್ದರು. ತದನಂತರ ಸ್ವತಹಃ ಇ.ಓ. ಮಾರುಕಟ್ಟೆಗೆ ತೆರಳಿ ಸ್ಥಳ ಪರಿಶೀಲಿಸಿದ್ದರು. ಈ ಸಂದರ್ಭ ಟೆಂಡರ್ ನಡೆಸುವ ಬಗ್ಗೆ ಕೇಳಿದ ಪ್ರಶ್ನೆಗೆ ಸಕಾರಾತ್ಮಕವಾಗಿ ಸ್ಪಂದಿಸದೆ, ಪಟ್ಟಣದಲ್ಲಿ ಮಾಂಸ ಮಾರಾಟ ಮಾಡುವವರ ಪರವಹಿಸಿ ಮಾತನಾಡಿದ್ದಾರೆ ಎಂದು ಸಭೆಯಲ್ಲಿ ಇ.ಓ ವಿರುದ್ಧ ಅಸಮಾಧಾನ ವ್ಯಕ್ತÀವಾಯಿತು. ಗ್ರಾ.ಪಂ. ಕೈಗೊಂಡ ನಿರ್ಣಯಕ್ಕೆ ಇ.ಓ. ಅನುಮತಿ ನೀಡದಿದ್ದಲ್ಲಿ ಪೊನ್ನಂಪೇಟೆಯ ಇ.ಓ. ಕಚೇರಿಯ ಮುಂಭಾಗ ಗ್ರಾ.ಪಂ. ಸದಸ್ಯರಿಂದ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೆಲ ಮಾಂಸ ವ್ಯಾಪಾರಸ್ಥರು ನ್ಯಾಯಾಲಯದಲ್ಲಿ ಗ್ರಾ.ಪಂ ವಿರುದ್ಧ ದಾವೆ ಹೂಡಿದ್ದು, ಈ ಬಗ್ಗೆ ಗ್ರಾ.ಪಂ ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದು ಸದಸ್ಯರು ಸಲಹೆ ನೀಡಿದರು.