ಮಡಿಕೇರಿ, ಮಾ.17: ರಾಷ್ಟ್ರದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಕಾಪಾಡುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಸಹಕಾರದಲ್ಲಿ ಸಂವಿಧಾನದ ಮೂಲಭೂತ ಕರ್ತವ್ಯಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ನ್ಯಾಯಾಧೀಶರು ಚಾಲನೆ ನೀಡಿ ಮಾತನಾಡಿದರು.

ಧಾರ್ಮಿಕ, ಭಾಷಿಕ, ಪ್ರಾದೇಶಿಕ ಭಿನ್ನತೆಗಳನ್ನು ಬದಿಗೊತಿ,್ತ ಭಾರತೀಯರಾದ ಎಲ್ಲರೂ ಸಾಮರಸ್ಯ, ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳುವದು, ಜೊತೆಗೆ ಸಂಯುಕ್ತ ಸಂಸ್ಕøತಿಯ ಶ್ರೀಮಂತ ಪರಂಪರೆಯನ್ನು ಗೌರವಿಸುವದು ಎಲ್ಲರ ಕರ್ತವ್ಯವಾಗಿದೆ ಎಂದು ಪ್ರದಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಪಡೆಯುವದರ ಜೊತೆಗೆ ಕರ್ತವ್ಯಗಳನ್ನು ಪಾಲಿಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ, ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಕಾನೂನನ್ನು ಗೌರವಿಸಬೇಕು. ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಅವರು ಮಾತನಾಡಿ ಭಾರತದ ಸಂವಿಧಾನವು ಬೃಹತ್ ಸಂವಿಧಾನವಾಗಿದ್ದು, ಸಂವಿಧಾನದಲ್ಲಿನ ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡುವದು ಎಲ್ಲರ ಕರ್ತವ್ಯವಾಗಿದೆ ಎಂದರು.

ವಕೀಲ ಕುಂಞ ಅಬ್ದುಲ್ಲಾ ಅವರು ಮಾತನಾಡಿ ದೇಶದಲ್ಲಿ 6,400 ಜಾತಿಗಳು, 8 ಧರ್ಮಗಳು, 32ಕ್ಕೂ ಅಧಿಕ ಭಾಷೆ ಮಾತನಾಡುವವರು ಇದ್ದಾರೆ. ಇಡೀ ಪ್ರಪಂಚದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬಹುದಾಗಿದೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಉಪಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ತನ್ನನ್ನು ಪ್ರೀತಿಸುವದು ಮೂಲಭೂತ ಹಕ್ಕಾದರೆ, ತನ್ನಂತೆಯೇ ಇತರರನ್ನು ಪ್ರೀತಿಸುವದು ಮೂಲಭೂತ ಕರ್ತವ್ಯವಾಗಿದೆ ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಬೀರ್ ಪಾಷ, ಉಪನ್ಯಾಸಕರು, ವಿದ್ಯಾರ್ಥಿಗಳು ಇತರರು ಇದ್ದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿ ನೀಲಮ್ಮ ಪ್ರಾರ್ಥಿಸಿದರು. ವಿದ್ಯಾರ್ಥಿ ಗಂಗಾಧರ ವಂದಿಸಿದರು.