ಸೋಮವಾರಪೇಟೆ, ಮಾ. 17: ಇಲ್ಲಿನ ಮುತ್ತಪ್ಪಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳೆದ ಮೂರು ದಿನಗಳ ಕಾಲ ನಡೆದ ವಾರ್ಷಿಕ ಜಾತ್ರೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ತೆರೆ ಕಂಡಿತು. ಜಾತ್ರೋತ್ಸವದ ಅಂಗವಾಗಿ ನಡೆಯುವ ದೈವಗಳ ವೆಳ್ಳಾಟಂ ಹಾಗೂ ಕೋಲಗಳಿಗೆ ಪಯಂಗುತ್ತಿ ಸೇವೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಸಂಜೆ ದೇವಾಲಯದಿಂದ ಹೊರಟ ಮುತ್ತಪ್ಪ ದೈವದ ಮೊದಲ್ ಕಲಶದೊಂದಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಮಂಟಪದಲ್ಲಿ ಮುತ್ತಪ್ಪ-ತಿರುವಪ್ಪ ದೈವದ ಭಾವಚಿತ್ರವನ್ನಿರಿಸಿ ಕೇರಳದ ಸಿಂಗಾರಿ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ದೇವಾಲಯದ ವಿವಿಧ ಗುಡಿಗಳಲ್ಲಿ ಪ್ರತಿಷ್ಠಾಪಿಸಿರುವ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಕರಿಂಗುಟ್ಟಿ ಶಾಸ್ತಾವು, ಕಂಡಕರ್ಣ ದೈವ, ಭಗವತಿ ದೇವಿ, ರಕ್ತಚಾಮುಂಡಿ, ಪೊಟ್ಟನ್ ದೈವದ ವೆಳ್ಳಾಟಂ ಹಾಗೂ ಕೋಲಗಳು ನಡೆದವು. ಮಧ್ಯರಾತ್ರಿ ದೇವರ ಕಳಿಕ್ಕಾಪಾಟ್ ನಡೆಯಿತು. ಜಾತ್ರೋತ್ಸವದ ಅಂಗವಾಗಿ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ಪಟಾಕಿ, ಸಿಡಿಮದ್ದಿನ ಪ್ರದರ್ಶನ ನಡೆಯಿತು. ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆದವು. ಮಂಗಳವಾರ ಬೆಳಗ್ಗಿನ ಜಾವ ಪೊಟ್ಟನ್ ದೈವ ಅಗ್ನಿಕೊಂಡಕ್ಕೇರುವದು, ವಿಷ್ಣುಮೂರ್ತಿ, ಕಂಡಕರ್ಣ, ಗುಳಿಗನ್ ದೈವಕ್ಕೆ ಗುರುಶ್ರೀ ದರ್ಪಣ ನಡೆಯುವದರೊಂದಿಗೆ ಜಾತ್ರೋತ್ಸವ ಮುಕ್ತಾಯಗೊಂಡಿತು.