ಸೋಮವಾರಪೇಟೆ, ಮಾ. 17: ಸ್ಥಳೀಯವಾಗಿ ಇರುವ ದೇವಾಲಯಗಳ ಅಭಿವೃದ್ಧಿಯಿಂದ ನಾಡು ಸುಭೀಕ್ಷವಾಗಿರುತ್ತದೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.

ಇಲ್ಲಿನ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪ ಸ್ವಾಮಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಕಾಲದಲ್ಲಿ ಮಳೆ ಬಾರದಿದ್ದಲ್ಲಿ ಸಾಮೂಹಿಕವಾಗಿ ಮಳೆಗಾಗಿ ದೇವರ ಮೊರೆಹೋಗುವ ಕಾರ್ಯ ಈಗಲೂ ನಡೆದು ಬರುತ್ತಿದೆ. ನಮ್ಮಲ್ಲಿರುವ ಕತ್ತಲೆಯನ್ನು ಹೋಗಲಾಡಿಸಿ, ಬೆಳಕನ್ನು ಕೊಡುವ ಕೆಲಸ ದೇವರಲ್ಲಿನ ನಿತ್ಯ ಪ್ರಾರ್ಥನೆಯಿಂದ ಸಾಧ್ಯ. ಇಲ್ಲಿನ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತನ್ನದೇ ವಿಶೇಷ ಚೈತನ್ಯವಿದ್ದು, ಅದರ ಪ್ರತೀಕವಾಗಿ ದೇವಾಲಯದೊಂದಿಗೆ ಈ ನಾಡು ಅಭಿವೃದ್ಧಿ ಸಾಗಿಸಲು ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ದೇಶದಲ್ಲಿ ಪ್ರತಿಯೋರ್ವರು ಅವರವರ ಧರ್ಮಕ್ಕೆ ಅನುಗುಣವಾಗಿ ದೇವರ ಸೇವಾ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಪ್ರತಿಯೊಬ್ಬರೂ ದೇವರಲ್ಲಿ ಭಯ-ಭಕ್ತಿಯನ್ನು ತೋರುತ್ತಾ, ಶಾಂತ ಮನಸ್ಸಿನಿಂದ ಸರ್ವರನ್ನೂ ಕಾಣುವಂತಾದರೆ ಪ್ರಶಾಂತ ಸಮಾಜವನ್ನು ನಿರೀಕ್ಷಿಸಬಹುದು ಎಂದರು.

ಸಭಾಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ಕುಮಾರ್ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಭದ್ರಾವತಿಯ ಆರ್ಕೆಸ್ಟ್ರಾ ತಂಡದ ಮುಖ್ಯಸ್ಥ ಲೋಕನಾಥ್, ದೇವಾಲಯ ಸಮಿತಿ ಗೌರವಾಧ್ಯಕ್ಷ ಎನ್.ಜಿ. ಜನಾರ್ಧನ್, ಪ್ರಧಾನ ಕಾರ್ಯದರ್ಶಿ ಎನ್.ಟಿ. ಪ್ರಸನ್ನ, ನಿರ್ದೇಶಕ ಬಿ.ಎ. ಭಾಸ್ಕರ್ ಇದ್ದರು. ನಂತರ ಭದ್ರಾವತಿಯ ಲೋಕನಾಥ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.