ವೀರಾಜಪೇಟೆ, ಮಾ. 17: ಡಾ. ಅಂಬೇಡ್ಕರ್ ಪುಸ್ತಕಗಳನ್ನು ಪ್ರೀತಿಸಿದವರಲ್ಲಿ ಮೊದಲಿಗರು. 50 ವರ್ಷ ಬದುಕಿನಲ್ಲಿ ಓದು, ಬರಹದಲ್ಲಿ ತೊಡಗಿಸಿಕೊಂಡು, ದಿನದ 18 ಗಂಟೆ ಕಾಲ ಅಧ್ಯಯನಕ್ಕಾಗಿ ಮೀಸಲಿರಿಸಿದವರು. ಅವರ ಓದಿನ ಹವ್ಯಾಸ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಅದು ಅಂತರಾತ್ಮದಲ್ಲಿ ಬೆಳೆದು ಬರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧನಕಾರರಾದ ಡಾ. ಡಿ.ಜೆ. ಶಿವಕುಮಾರ್ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಮ್ಮೇಳನ ಆಯೋಜನ ಸಮಿತಿ ಹಾಗೂ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 125 ನೇ ಜಯಂತಿಯ ವರ್ಷಾಚರಣೆಯ ಅಂಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಇಂದಿನ ಯುವ ಜನತೆ ಅಧುನಿಕ ಸಲಕರಣೆಗಳಿಂದ ಅಕರ್ಷಿತರಾಗಿದ್ದಾರೆ, ಪುಸ್ತಕ ಮತ್ತು ಗ್ರಂಥಾಲಯದಿಂದಲೂ ದೂರ ಸರಿದಿದ್ದಾರೆ. ಆದರೆ ಅಂಬೇಡ್ಕರ್ ವ್ಯಕ್ತಿತ್ವದ ಬಗ್ಗೆ ಅರಿತರೆ ಗ್ರಂಥಾಲಯ ಮತ್ತು ಪುಸ್ತಕಗಳು ತಾವಾಗಿಯೇ ಅವರ ಬಳಿ ಬರಲಿದೆ. ಅಂಬೇಡ್ಕರ್ ಮಾನವ ಹಕ್ಕಿನ ಮಹಾನ್ ಪ್ರತಿಪಾದಕ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪ.ಪಂ. ಸದಸ್ಯ ಮೊೈನುದ್ದಿನ್ ಮಾತನಾಡಿ, ಪ್ರಜಾಪ್ರಭುತ್ವದ ಸಂವಿಧಾನದ ರೂವಾರಿಯಾಗಿರುವ ಅಂಬೇಡ್ಕರ್ ಅವರು ಒಂದು ವರ್ಗದ ನಾಯಕರೆಂದು ಹೇಳದೆ ರಾಷ್ಟ್ರದ ನಾಯಕರೆಂದು ಗೌರವಿಸಬೇಕು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಡಿ. ಸರಸ್ವತಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಮಂಜುನಾಥ್, ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನದ ಜಿಲ್ಲಾ ಸಂಯೋಜಕ ವಿನಯ ಕುಮಾರ್, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ವನಿತ್ ಕುಮಾರ್, ಉಪನ್ಯಾಸಕ ವೇಣುಗೋಪಾಲ್, ಕಾಮಾಕ್ಷಿ, ಮಾದವಯ್ಯ, ಪ್ರೊ. ಬಸವರಾಜು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಟಿ. ಬೋಪಯ್ಯ ಮುಂತಾದವರು ಉಪಸ್ಥಿತರಿದ್ದರು.