ಹೆಬ್ಬಾಲೆ, ಮಾ.17 : ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ಕುರಿತು ಪರಿಶೀಲನೆ ನಡೆಸಿ ತೆರವುಗೊಳಿಸಲು ಗ್ರಾಮಸಭೆಯಲ್ಲಿ ತೀರ್ಮಾನಿಸ ಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಲತಾಸತೀಶ್ ಅಧ್ಯಕ್ಷತೆಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೆಬ್ಬಾಲೆ ಗ್ರಾಮದಲ್ಲಿರುವ 19 ಎಕರೆ ಪೈಸಾರಿ ಜಾಗದಲ್ಲಿ 3 ಎಕರೆ ಪ್ರದೇಶದಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಲಾಗಿದ್ದು, ಉಳಿದ ಜಾಗವನ್ನು ಗುರುತಿಸಿ ಅರ್ಹ ವಸತಿ ರಹಿತರಿಗೆ ನಿವೇಶನಗಳನ್ನು ಹಂಚಬೇಕು ಎಂದು ಗ್ರಾಮದ ಮುಖಂಡ ಎಚ್.ಎಂ. ಜಗದೀಶ್ ಒತ್ತಾಯಿಸಿದರು.
ನೂರಾರು ರೈತರ ಜಮೀನಿಗಳಿಗೆ ನೀರುಣಿಸುವ ಪುರಾತನ ದೇವರೆಕೆರೆ ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಹೂಳು ತುಂಬಿ ಕೂಡಲೇ ದೇವರೆಕೆರೆ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.
ಸರ್ವೇ ನಂ 43/2 ರಲ್ಲಿ ಅಂಬೇಡ್ಕರ ಭವನ ನಿರ್ಮಾಣ ಜಾಗ ಒದಗಿಸಿಕೊಡಬೇಕು ಎಂದು ಅಂಬೇಡ್ಕರ್ ಯುವಕ ಸಂಘದ ಮುಖಂಡರು ಒತ್ತಾಯಿಸಿದರು.
ಗ್ರಾ.ಪಂ.ಸೇರಿದ ಸರ್ವೇನಂ 17/2ರ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳಿಂದ ತೆರವುಗೊಳಿಸಿ ಪಂಚಾಯಿತಿ ಜಾಗವನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಹುಲುಸೆ ಗ್ರಾಮದಲ್ಲಿ ಚರಂಡಿ ಒಡೆದು ನೀರು ಮನೆಗಳಿಗೆ ನುಗ್ಗುತ್ತಿದ್ದು, ಇದರಿಂದ ಅಕ್ಕ-ಪಕ್ಕದ ಮನೆಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಮಲ್ಲಿಕಾರ್ಜುನ ದೂರಿದರು. ಮುಂದಿನ ದಿನಗಳಲ್ಲಿ ಕಿರು ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳ ಲಾಗುವದು ಎಂದು ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ನಾಗರಾಜು ಹೇಳಿದರು.
ಇದೇ ಸಂದರ್ಭ ಗ್ರಾಮ ಸಭೆಯಲ್ಲಿ ವಸತಿ ರಹಿತರ ಪಟ್ಟಿಯನ್ನು ಸಿದ್ಧಪಡಿಸಲಾಯಿತು. 50 ಮಂದಿ ಹೆಸರ ಪಟ್ಟಿಯನ್ನು ಅಂತಿಮ ಗೊಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್. ಶ್ರೀನಿವಾಸ್ ಮಾತನಾಡಿ, ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮರೂರು ಮತ್ತು ಬನಶಂಕರಿ ದೇವಸ್ಥಾನ ರಸ್ತೆ ಅಭಿವೃದ್ಧಿ, ಕಣಿವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಡೆಗೋಡೆಗೆ ರೂ.2 ಲಕ್ಷ, ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ತಡೆಗೋಡೆ ನಿರ್ಮಾಣಕ್ಕೆ ರೂ.2 ಲಕ್ಷ ಒದಗಿಸಲಾಗಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದರು.
ಹೆಬ್ಬಾಲೆ ಗ್ರಾಮದ ಎರಡು ರಸ್ತೆಗಳನ್ನು ತಲಾ ರೂ. 3.5 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಕೈಗೆತ್ತಿಕೊಳ್ಳ ಲಾಗಿದೆ. ಅಲ್ಲದೆ ಹಳಗೋಟೆ ಕಾಂಕ್ರಿಟ್ ರಸ್ತೆ ಅಭಿವೃದ್ಧಿಗೆ ರೂ.2 ಲಕ್ಷ ಹಾಗೂ ಅಂಗನವಾಡಿ ರಿಪೇರಿ ಕಾರ್ಯಕ್ಕೆ ರೂ.1 ಲಕ್ಷ ಅನುದಾನವನ್ನು ವಿನಿಯೋಗಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭ ನೋಡೆಲ್ ಅಧಿಕಾರಿ ನಾಗರಾಜಾಚಾರಿ, ವಿವಿಧ ಇಲಾಖೆ ಅಧಿಕಾರಿಗಳು, ಸದಸ್ಯರಾದ ಎಚ್.ಟಿ.ದಿನೇಶ್, ಅಶೋಕ್, ಮಧುಸೂದನ್, ಮತ್ತಿತರರು ಹಾಜರಿದ್ದರು.