ಮಡಿಕೇರಿ, ಮಾ. 17: ಶಾಲೆ, ಆಸ್ಪತ್ರೆಗಳ ಸನಿಹದಲ್ಲೇ ಕಸ ವಿಲೇವಾರಿ ಮಾಡುವ ಮೂಲಕ ಶನಿವಾರಸಂತೆ ಗ್ರಾಮ ಪಂಚಾಯಿತಿಯು ಸ್ವಚ್ಛ ಭಾರತದ ಪರಿಕಲ್ಪನೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ, ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ್, ಅಶುಚಿತ್ವದ ವಿರುದ್ಧ ತಾ. 18 ರಂದು (ಇಂದು) ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವದಾಗಿ ತಿಳಿಸಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿಯು ಅಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಶಾಲೆಗಳ ಸುತ್ತಮುತ್ತ ಕಸವನ್ನು ಸುರಿಯುವ ಮೂಲಕ ಸಾಂಕ್ರಮಿಕ ರೋಗ ಹರಡಲು ಅನುವು ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಸಂಘಟನೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಕಂದಾಯ ಇಲಾಖಾಧಿಕಾರಿಗಳು ಕಸ ವಿಲೇವಾರಿಗೆ ಪರ್ಯಾಯ ಜಾಗವನ್ನು ಗುರುತಿಸಿಕೊಟ್ಟಿದ್ದರೂ, ಅದನ್ನು ಸ್ವಾಧೀನ ಪಡಿಸಿಕೊಳ್ಳುವಲ್ಲಿ ಪಂಚಾಯಿತಿ ಆಡಳಿತ ಮಂಡಳಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯು ತಾ. 18 ರಂದು ಶನಿವಾರಸಂತೆಯ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೋಷಕರು ಗುಡುಗಳಲೆ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸುವದರೊಂದಿಗೆ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ. ಅಲ್ಲದೆ ಕಸ ವಿಲೇವಾರಿಗೆ ಪರ್ಯಾಯ ಜಾಗ ಗುರುತಿಸುವವರೆಗೂ ಸಂಘಟನೆ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಶನಿವಾರಸಂತೆ ಹೋಬಳಿ ಅಧ್ಯಕ್ಷ ಎನ್.ಡಿ. ಆನಂದ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ, ಸೋಮವಾರಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷ ಬಿ.ಎ. ಫ್ರಾನ್ಸಿಸ್ ಡಿಸೋಜಾ ಹಾಗೂ ಶನಿವಾರಸಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಧನು ಪ್ರಸಾದ್ ಉಪಸ್ಥಿತರಿದ್ದರು.