ಸೋಮವಾರಪೇಟೆ, ಮಾ. 17: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಲು 15 ದಿನಗಳ ಕಾಲ ಗಡುವು ನೀಡಲಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದಿಂದ ಯಾವದೇ ಸ್ಪಂದನೆ ದೊರಕದ ಹಿನ್ನೆಲೆ ತಾ. 20ರಂದು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಬಡವರು, ಕೂಲಿ ಕಾರ್ಮಿಕರು, ರೈತರು ಹೆಚ್ಚಾಗಿ ವಾಸಿಸುತ್ತಿರುವ ಸೋಮವಾರಪೇಟೆ ಯಲ್ಲಿ ಆಸ್ಪತ್ರೆಯ ಅವ್ಯವಸ್ಥೆಯಿಂದಾಗಿ ಜನಸಾಮಾನ್ಯರು ಪರದಾಟ ಅನುಭವಿಸುತ್ತಿದ್ದಾರೆ. ಹಾಗೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ದೂರಿದರು.
ಈ ಹಿನ್ನೆಲೆ ತಾ. 20ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಪುಟ್ಟಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಗಾಂಧಿ ವೃತ್ತದ ಬಳಿ ಸಾಂಕೇತಿಕ ರಸ್ತೆ ತಡೆ ನಡೆಸಲಾಗುವದು. ನಂತರ ತಾಲೂಕು ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವದು. ಇಲಾಖೆಯ ಮೇಲಧಿಕಾರಿಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ನಡೆಸಲಾಗುವದು ಎಂದು ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಕರವೇ ನಗರಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ರವೀಶ್, ರೋಹಿತ್ ಗೌಡ, ಮೋಹನ್, ರೂಪಾ ಸುರೇಶ್ ಅವರುಗಳು ಉಪಸ್ಥಿತರಿದ್ದರು.