ಶ್ರೀಮಂಗಲ, ಮಾ. 17: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಬೆಳೆಗಾರರು ಬೆಳೆದು ಮಾರಾಟ ಮಾಡುವ ಕರಿಮೆಣಸಿನ ಮೇಲೆ ‘ಸೆಸ್' ತೆರಿಗೆ ಹಾಕುವದನ್ನು ರದ್ದುಗೊಳಿಸಬೇಕು ಹಾಗೂ ಆರ್.ಟಿ.ಸಿ.ಯ 9ನೆಯ ಬೆಳೆ ಕಾಲಂನಲ್ಲಿ ಕರಿಮೆಣಸು ಎಂದು ನಮೂದಿಸುವ ಮೂಲಕ ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕೆಂದು ಬೆಳೆಗಾರರು ಒತ್ತಾಯಿಸಿದರು.
ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಡೆದ ರೈತರ ಭಾಗಿದಾರ ಶಿಕ್ಷಣ ಸಭೆ ಹಾಗೂ ರೈತ ನೊಂದಾವಣೆ ಅಭಿಯಾನದಲ್ಲಿ ರೈತರು ಒತ್ತಾಯಿಸಿದರು.
ಈ ಸಂಧರ್ಭ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ಕಳ್ಳಂಗಡ ಬಾಲಕೃಷ್ಣ ಅವರು, ಮುಂದಿನ ದಿನಗಳಲ್ಲಿ ಆನ್‍ಲೈನ್ ಮೂಲಕ ಕೃಷಿ ಉತ್ಪನ್ನಗಳ ಹಣ ಪಾವತಿಯಾಗುವ ದರಿಂದ ಪ್ರತಿಯೊಬ್ಬ ರೈತರು ಸಮಿತಿ ಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಆರ್.ಟಿ.ಸಿ.ಯಲ್ಲಿ ಹೆಸರಿರುವ ಪ್ರತಿಯೊಬ್ಬ ರೈತ, ಬೆಳೆಗಾರ ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿದರು.
(ಮೊದಲ ಪುಟದಿಂದ) ಬೆಳೆಗಾರ ಪೆಮ್ಮಣಮಾಡ ರಮೇಶ್ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೂಲಕ ಬೆಂಬಲ ಬೆಲೆಗೆ ಸರಕಾರ ಭತ್ತ ಖರೀದಿ ಮಾಡುವ ಸಂದರ್ಭ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಅವರು, ರೈತ ನೊಂದಾವಣಿ ಮೂಲಕ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಳೆ ದೊರೆಯುತ್ತದೆ ಎಂದರು. ಶ್ರೀಮಂಗಲ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಮಾತನಾಡಿದರು.
ವೇದಿಕೆಯಲ್ಲಿ ಸಮಿತಿಯ ಸದಸ್ಯೆ ಬೊಳ್ಳಜ್ಜಿರ ಸುಶೀಲಾ ಅಶೋಕ್, ಶ್ರೀಮಂಗಲ ಗ್ರಾ.ಪಂ. ಉಪಾಧ್ಯಕ್ಷ ಕಳ್ಳಂಗಡ ರಜತ್ ಪೂವಣ್ಣ ಹಾಜರಿದ್ದರು.