ಮಡಿಕೇರಿ ಮಾ.17 : ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕ ಫಲಾನುಭವಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಬೇಕೆನ್ನುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. 20 ರಂದು ಪ್ರತಿಭಟನೆ ನಡೆಸಲು ಸಿಐಟಿಯು ಸಂಯೋಜಿತ ಸಂಘಟನೆ ಕೊಡಗು ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸಿ. ಸಾಬು, ಕಳೆದ ಅನೇಕ ವರ್ಷಗಳಿಂದ ಕಟ್ಟಡ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದರು ಸರ್ಕಾರ ನಿರ್ಲಕ್ಷ್ಯ ಮನೋಭಾವನೆ ತಾಳಿದೆಯೆಂದು ಆರೋಪಿಸಿದರು. ಸೆಸ್ ರೂಪದಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸುತ್ತಿರುವ ಸರ್ಕಾರ ಕಾರ್ಮಿಕರಿಗಾಗಿ ಯಾವುದೇ ಸೌಲಭ್ಯಗಳನ್ನು ಒದಗಿಸುತ್ತಿಲ್ಲ.

ವಿವಾಹ, ಪಿಂಚಣಿ, ವೈದ್ಯಕೀಯ ಸೌಲಭ್ಯಗಳನ್ನು ಯಾವದೇ ಷರತ್ತುಗಳಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕು, ಕಲ್ಯಾಣ ಮಂಡಳಿಯು ಎಲ್ಲಾ ಹಂತಗಳಲ್ಲು ಫಲಾನುಭವಿಗಳ ನೋಂದಣಿ, ನವೀಕರಣ, ಸೌಲಭ್ಯಗಳ ವಿತರಣೆಗೆ ವ್ಯವಸ್ಥಿತ ಕಛೇರಿಯನ್ನು ತೆರೆಯಬೇಕು, ಕಾರ್ಮಿಕ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಅರ್ಹ ಯೋಜನೆಗಳ ಹಣ ಮಂಜೂರಾಗುವಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಶೀಘ್ರ ಮರಳು ನೀತಿಯನ್ನು ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವದಾಗಿ ಎ.ಸಿ. ಸಾಬು ತಿಳಿಸಿದರು.

ಕೊಡಗು ಜಿಲ್ಲೆಯನ್ನು ಸೂಕ್ಷ್ಮ ಪರಿಸರ ವಲಯ ಪ್ರದೇಶ ವ್ಯಾಪ್ತಿಗೆ ತರುವುದನ್ನು ಸಂಘÀಟನೆ ವಿರೋಧಿಸಲಿದೆ ಎಂದು ಎ.ಸಿ.ಸಾಬು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಸಿ.ಎ. ಹಮೀದ್ ಉಪಸ್ಥಿತರಿದ್ದರು.