ಕುಶಾಲನಗರ, ಮಾ 17: ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವದೇ ಸಮಸ್ಯೆ ತಲೆದೋರದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಕುಶಾಲನಗರ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿ ಆಡಳಿತ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ಪಟ್ಟಣದ ವಾರ್ಡ್‍ಗಳ ಹಾಗೂ ಸುತ್ತಮುತ್ತಲ ಗ್ರಾಮಗಳ ವಾಸ್ತವ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.
ಕುಶಾಲನಗರದ ಕರ್ನಾಟಕ ಕುಡಿವ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಕಲೆಹಾಕಿದ ಶಾಸಕರು ಸಮಸ್ಯೆ ತಲೆದೋರಿರುವ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಕೊಳವೆ ಬಾವಿಗಳನ್ನು ಕೊರೆದು ನೀರು ಒದಗಿಸಲು ಕ್ರಮಕೈಗೊಳ್ಳಬೇಕು. ನಂತರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಶಾಲನಗರ ಸುತ್ತಮುತ್ತಲ 25 ಸಾವಿರ ಜನತೆಗೆ 25 ಲಕ್ಷ ಲೀಟರ್ ಪ್ರಮಾಣದ ನೀರಿನ ಅವಶ್ಯಕತೆಯಿದ್ದು ಯಾವದೇ ತೊಂದರೆಯಾಗದಂತೆ ಎಚ್ಚರವಹಿಸಬೇಕೆಂದರು. ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಹೆಚ್.ಜೆ. ಕರಿಯಪ್ಪ, ಡಿ.ಕೆ. ತಿಮ್ಮಪ್ಪ, ರೇಣುಕಾ, ಪ್ರಮೋದ್ ಮುತ್ತಪ್ಪ, ಹೆಚ್.ಡಿ. ಚಂದ್ರು ತಮ್ಮ ವಾರ್ಡ್‍ಗಳಲ್ಲಿ ಕುಡಿವ ನೀರಿನ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಪಟ್ಟಣ ಪಂಚಾಯ್ತಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಕಲ್ಪಿಸುವಂತೆ ಸದಸ್ಯರುಗಳು ಮನವಿ ಮಾಡಿದರು. ಸ್ಥಳೀಯ ಸಂಪನ್ಮೂಲಗಳ ಮೂಲಕ ಆದಾಯ ಕ್ರೋಢೀಕರಿಸುವಂತೆ ಸೂಚನೆ ನೀಡಿದ ರಂಜನ್, ಹಾರಂಗಿ ಜಲಾಶಯದಿಂದ ಕುಶಾಲನಗರಕ್ಕೆ ಕುಡಿವ ನೀರು ಒದಗಿಸುವ ಯೋಜನೆಗೆ ಸರಕಾರದ ಮೂಲಕ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಕುಶಾಲನಗರದಲ್ಲಿ ಸ್ಮಶಾನ ಅಭಿವೃದ್ಧಿಗೆ, ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಕಲ್ಪಿಸುವದಾಗಿ ಅವರು ತಿಳಿಸಿದರು. ಪಂಚಾಯಿತಿ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಆ ಮೂಲಕ ಶಾಶ್ವತ ಆದಾಯದ ಮೂಲಗಳಿಗೆ ಯೋಜನೆ ರೂಪಿಸು ವಂತೆ ಶಾಸಕರು ಕಿವಿಮಾತು ಹೇಳಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸತೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಂ. ಮಧುಸೂದನ್, ಸದಸ್ಯ ರಾದ ಹೆಚ್.ಕೆ. ಪಾರ್ವತಿ, ರಶ್ಮಿ ಅಮೃತ್, ಲಲಿತಾ ಹಾಗೂ ನೀರು ಸರಬರಾಜು ಮಂಡಳಿಯ ಅಧಿಕಾರಿ ಗಳಾದ ಆನಂದ್, ಅಕ್ಷಯ್ ಇದ್ದರು.