ಗೋಣಿಕೊಪ್ಪಲು, ಮಾ. 17: ತಿತಿಮತಿ ಗ್ರಾ.ಪಂ. ಕಟ್ಟಡ ದುರಸ್ತಿ ಕಾರ್ಯಕ್ಕೆ ನಿಯಮವನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಗ್ರಾ.ಪಂ. ಸದಸ್ಯೆ ಪಂಜರಿ ಎರವರ ವಿಜಯ ಆರೋಪಿಸಿದ್ದಾರೆ.ತಿತಿಮತಿ ಗ್ರಾ.ಪಂ. ಕಟ್ಟಡವನ್ನು ರಾಜೀವ್ ಗಾಂಧಿ ಸೇವಾ ಕೇಂದ್ರ ಯೋಜನೆಯಡಿ ಬಿಡುಗಡೆಗೊಂಡ ರೂ. 6 ಲಕ್ಷ ಅನುದಾನದಲ್ಲಿ ದುರಸ್ತಿ ಮಾಡಬೇಕಿದ್ದಲ್ಲಿ ‘ಇ ಟೆಂಡರ್’ ಮೂಲಕ ಪ್ರಕಟಣೆ ನೀಡಬೇಕಿತ್ತು. ಆದರೆ, ಪೆÇನ್ನಂಪೇಟೆಯ ವ್ಯಕ್ತಿಯೊಬ್ಬರಿಗೆ ನಿಯಮ ಬಾಹಿರವಾಗಿ ರೂ. 6 ಲಕ್ಷ ಗುತ್ತಿಗೆಯನ್ನು ನೀಡಿದ್ದು ಲೋಪವೆಸಗಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರೂ. 5 ಲಕ್ಷಕ್ಕೂ ಅಧಿಕ ಮೊತ್ತದ ಕಾಮಗಾರಿ ಕೈಗೊಳ್ಳಬೇಕಿದ್ದಲ್ಲಿ ಸಾರ್ವಜನಿಕ ಪ್ರಕಟಣೆ ನೀಡಬೇಕಿತ್ತು ಎಂದು ಗ್ರಾ.ಪಂ. ಸದಸ್ಯೆ ಪಿ.ಎಂ. ವಿಜಯ ಆರೋಪಿಸಿದ್ದಾರೆ.
ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಭಾರೀ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಗ್ರಾ.ಪಂ. ಕಟ್ಟಡದ ಮೇಲ್ಛಾವಣಿ ದುರಸ್ತಿ ಮಾಡಲಾಗಿದ್ದು, ಹಳೆಯ ಹೆಂಚುಗಳು ಹಾಗೂ ಮರಮುಟ್ಟುಗಳನ್ನು ಮತ್ತೆ ಬಳಸಲಾಗಿದೆ. ಹೊಸ ಹೆಂಚು ಅಳವಡಿಸಿರುವದಿಲ್ಲ. ನೆಲಹಾಸು, ಸುಣ್ಣ ಬಣ್ಣ ಒಳಗೊಂಡಂತೆ ಕಾಮಗಾರಿಯನ್ನು ಕೇವಲ ರೂ. 2 ಲಕ್ಷ ಅಂದಾಜು ವೆಚ್ಚದ ಕಾಮಗಾರಿಗೆ ರೂ. 6 ಲಕ್ಷ ತೋರಿಸಿ, ಹಣ ದುರ್ಬಳಕೆಯ ಸಾಧ್ಯತೆ ಇದ್ದು, ತಾನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿರುವದಾಗಿ ವಿಜಯ ಮಾಹಿತಿ ನೀಡಿದ್ದಾರೆ.