ನಾಪೋಕ್ಲು, ಮಾ. 17: ಧರ್ಮ ಮತ್ತು ನಂಬಿಕೆ ಆಧಾರದಲ್ಲಿ ಭಾರತ ದೇಶ ಪ್ರಜ್ವಲಿಸುತ್ತಿದೆ. ಪ್ರತಿಯೊಂದು ಜೀವಿ ಮತ್ತು ಪರಿಸರದಲ್ಲಿ ನಾವು ದೇವರನ್ನು ಕಾಣುವವರು. ಹಿರಿಯರು ಹಾಕಿಕೊಟ್ಟ ಇಂತಹ ಚೌಕಟ್ಟಿನ ಮೂಲಕ ನಂಬಿಕೆ ಆಧಾರದಲ್ಲಿ ಭಾರತ ದೇಶ ಇದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಅವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಿರ್ಮಾಣಗೊಂಡ ಕಛೇರಿ ಮತ್ತು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ, ಮಾತನಾಡಿದರು. ಯುವಪೀಳಿಗೆ ಯಾಂತ್ರಿಕೃತ ಬದುಕಿನೊಂದಿಗೆ, ಸಂಸ್ಕಾರ, ಸಂಸ್ಕøತಿಯನ್ನು ಬೆಳೆಸಿಕೊಳ್ಳುವ ಅಗತ್ಯತೆ ಇದೆ. ಸಮಾಜದ ಆಧಾರ ಸ್ತಂಭಗಳಾದ ಪ್ರೀತಿ, ವಿಶ್ವಾಸ, ಸಂಸ್ಕøತಿ, ಸಂಸ್ಕಾರ ಕಣ್ಮರೆಯಾಗದಂತೆ ಜೀವತುಂಬಬೇಕು ಎಂದು ಅವರು ಹೇಳಿದರು.

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಶ್ರಾಂತ ಕುಲಪತಿ ಡಾ|ಟಿ.ಆರ್.ಸುಬ್ರಹ್ಮಣ್ಯ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಹರೀಶ್ಚಂದ್ರ, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷ ನಾರಾಯಣ ಕೇಕಡ್ಕ, ಪ್ರಗತಿಪರ ಕೃಷಿಕ ರಾಜೇಂದ್ರ ಪ್ರಸಾದ್ , ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಯಶೋಧ, ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿ ಪಿ.ಎಂ. ರಂಗನಾಥ, ಸಿ.ಟಿ.ಸುರೇಶ್ ಕುಮಾರ್, ದೇವಳದ ಪದ್ಮನಾಭ ತಂತ್ರಿ ಅತಿಥಿಗಳಾಗಿ ಭಾಗವಹಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.