ಶ್ರೀಮಂಗಲ, ಮಾ. 17: ಕೇರಳ-ಕರ್ನಾಟಕ ಅಂತರಾಜ್ಯ ಗಡಿಭಾಗವಾಗಿರುವ ಕುಟ್ಟ ಗೇಟ್ ಮೂಲಕ ಜಿಲ್ಲೆಗೆ ಬರುವ ಕೇರಳ ರಾಜ್ಯದ ವಾಹನಗಳು ಕಾನೂನನ್ನು ಉಲ್ಲಂಘಿಸುತ್ತಿವೆ. ತಾ. 16ರಂದು ಸಾಮಥ್ರ್ಯಕ್ಕೆ ಮೀರಿ ಜನರನ್ನು ತುಂಬಿಕೊಂಡು ಅತೀವೇಗದಿಂದ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಜೀಪು ಮಗುಚಿ ಇಬ್ಬರು ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಇಂತಹ ಹಲವಾರು ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಿವೆ. ಆದ್ದರಿಂದ ಇಂತಹ ವಾಹನಗಳ ನಿಗ್ರಹಕ್ಕೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು. ಈ ಸಂಧರ್ಭ ಶ್ರೀಮಂಗಲ ಪಟ್ಟಣವನ್ನು ಒಂದು ಗಂಟೆ ಕಾಲ ಬಂದ್ ಮಾಡಿ ಮಾನವ ಸರಪಳಿ ರಚಿಸಿ, ಶ್ರೀಮಂಗಲ ಠಾಣಾಧಿಕಾರಿ ಹೆಚ್.ಸಿ. ಸಣ್ಣಯ್ಯ ಅವರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಶ್ರೀಮಂಗಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಂ.ಟಿ. ಕಾರ್ಯಪ್ಪ ಅವರು, ಕುಟ್ಟ-ಹುದಿಕೇರಿ-ಪೊನ್ನಂಪೇಟೆ, ಕುಟ್ಟ-ಕಾನೂರು-ಪೊನ್ನಂಪೇಟೆ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ವಾಹನ ಅಪಘಾತಗಳು ನಡೆಯುತ್ತಿದ್ದು, ಇದರಲ್ಲಿ ಬಹುತೇಕ ವಾಹನಗಳು ಕೇರಳ ರಾಜ್ಯಕ್ಕೆ ಸೇರಿದ್ದಾಗಿದ್ದು, ಕಾನೂನು ಉಲ್ಲಂಘಿಸುವ ವಾಹನಗಳಿಂದಲೇ ಅಪಘಾತಗಳು ಹೆಚ್ಚಾಗುತ್ತಿವೆ ಎಂದರು. ಈ ಬಗ್ಗೆ ತಕ್ಷಣದಿಂದಲೇ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆಯನ್ನು ಪೊಲೀಸ್ ಇಲಾಖೆಯ ಮೇಲೆ ಹೂಡುವ ಎಚ್ಚರಿಕೆಯನ್ನು ಅವರು ನೀಡಿದರು.

ಪ್ರಮುಖ ಬೇಡಿಕೆಗಳು

ಶ್ರೀಮಂಗಲ ಪಟ್ಟಣದಲ್ಲಿ ವೇಗ ನಿಯಂತ್ರಣ ಮಾಡಲು ಅಗತ್ಯ ಕ್ರಮ. ಪೊನ್ನಂಪೇಟೆಯಿಂದ ಕುಟ್ಟದವರೆಗೆ ರಾಜ್ಯ ಹೆದ್ದಾರಿಯಲ್ಲಿ ಪೆಟ್ರೋಲಿಂಗ್ ವ್ಯವಸ್ಥೆ ದಿನದ 24 ಗಂಟೆ ಮಾಡಬೇಕು. ಶ್ರೀಮಂಗಲ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಂಚಾರಿ ಪೊಲೀಸ್ ನೇಮಕ ಮಾಡಬೇಕು. ಕೇರಳದ ವಾಹನಗಳನ್ನು ಕುಟ್ಟ ಗೇಟ್ ಮಾತ್ರವಲ್ಲದೆ ಶ್ರೀಮಂಗಲದಲ್ಲೂ ಪ್ರತ್ಯೇಕ ತಾಪಾಸಣೆ ಮಾಡಬೇಕು. ಕೇರಳದಿಂದ ಕುಟ್ಟ ಗೇಟ್ ದಾಟುವಾಗ ವಾಹನದ ಸಾಮಥ್ರ್ಯಕ್ಕೆ ಸರಿಯಾಗುವಷ್ಟು ಮಾತ್ರ ಜನ ವಾಹನದಲ್ಲಿರುತ್ತಾರೆ. ಗೇಟ್ ಬಳಿ ಜನರನ್ನು ಇಳಿಸಿ ಗೇಟ್ ದಾಟಿದ ನಂತರ ಮತ್ತೆ ಸಾಮಥ್ರ್ಯಕ್ಕೆ ಮೀರಿ ವಾಹನಗಳಿಗೆ ತುಂಬಿಕೊಳ್ಳುತ್ತಿದ್ದಾರೆ. ಇದನ್ನು ಕಟ್ಟುನಿಟ್ಟಾಗಿ ನಿಗ್ರಹಿಸಬೇಕು.

ಕೇರಳದಿಂದ ಜಿಲ್ಲೆಗೆ ಆಗಮಿಸುವ ಬಹುತೇಕ ವಾಹನಗಳಲ್ಲಿ ಗಾಂಜಾ ಸರಬರಾಜಾಗುತ್ತಿದ್ದು, ಜಿಲ್ಲೆಯ ಯುವಪೀಳಿಗೆ ದುಷ್ಚಟಕ್ಕೆ ಬಲಿಯಾಗುತ್ತಿದೆ. ಆದ್ದರಿಂದ ವಾಹನಗಳ ಸಾಮಗ್ರಿಗಳನ್ನು ಸಹ ಕಟ್ಟುನಿಟ್ಟಾಗಿ ತಪಸಣೆ ನಡೆಸಬೇಕು. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮದ್ಯಸೇವನೆ ಮಾಡುವದಕ್ಕೆ ತಡೆ ಮಾಡಬೇಕು. ರಸ್ತೆ ಬದಿಯಲ್ಲೆ ಅಡುಗೆ ಮಾಡಿ ತ್ಯಾಜ್ಯ ಹಾಕುವವರ ಮೇಲೆ ಕ್ರಮ ಕೈಗೊಳ್ಳಬೇಕು. ಇರ್ಪು ಜಲಪಾತದಲ್ಲಿ ಪ್ರವಾಸಿಗರು ಮದ್ಯ, ಗಾಂಜಾ ಸೇವನೆ ಮಾಡಿ ಧಾರ್ಮಿಕ ಕೇಂದ್ರವಾಗಿರುವ ಇಲ್ಲಿ ಎಲ್ಲೆಮೀರಿ ವರ್ತಿಸುತ್ತಿದ್ದು, ಇಂಥವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ಗ್ರಾ.ಪಂ. ಉಪಾಧ್ಯಕ್ಷ ಕಳ್ಳಂಗಡ ರಜತ್ ಪೂವಣ್ಣ, ಗ್ರಾ.ಪಂ. ಸದಸ್ಯರಾದ ಅಜ್ಜಮಾಡ ಜಯಾ, ಚೋನೀರ ಕಾಳಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಕಳ್ಳಂಗಡ ಬಾಲಕೃಷ್ಣ, ಶ್ರೀಮಂಗಲ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ವರ್ತಕ ಪ್ರಮುಖರಾದ ಪ್ರಕಾಶ್, ವಾಣಿ ಮಾದಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.