ವೀರಾಜಪೇಟೆ, ಮಾ. 17: ಪತ್ನಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪಿ ಡಿ.ರಾಜು ಅಲಿಯಾಸ್ ರಾಜಪ್ಪ ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಎಂ. ನಾಗರಾಜ್ ಆಜೀವ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ತಾ.21-5-2013ರಂದು ಬೆಕ್ಕೆಸೊಡ್ಲೂರು ಗ್ರಾಮದ ಎಸ್. ಉತ್ತಯ್ಯ ಎಂಬವರ ತೋಟದ ಮನೆಯಲ್ಲಿ ವಾಸವಿದ್ದ ರಾಜು, ರಾತ್ರಿ 8-30ರ ಸಮಯದಲ್ಲಿ ಅಡುಗೆ ವಿಚಾರದಲ್ಲಿ ಪತ್ನಿ ಭಾಗ್ಯ ಎಂಬಾಕೆಯೊಂದಿಗೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತೆರಳಿದಾಗ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರ ಸ್ವರೂಪದ ಸುಟ್ಟ ಗಾಯಗಳಿಂದ ನರಳುತ್ತಿದ್ದ ಆಕೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸೇರಿಸಿದಾಗ ಭಾಗ್ಯ ತಾ.25-5-2013ರಂದು ಸಾವನ್ನಪ್ಪಿದ್ದಾಳೆ. ನಂತರ ಗೋಣಿಕೊಪ್ಪಲು ಪೊಲೀಸರು ರಾಜುವನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸರಕಾರದ ಪರವಾಗಿ ಅಭಿಯೋಜಕರಾದ ಕೆ. ನಾಗರಾಜ ಆಚಾರ್ ವಾದ ಮಂಡಿಸಿದರು.