ಮಡಿಕೇರಿ, ಮಾ. 17: ಗೋಣಿಕೊಪ್ಪಲು ಕಾವೇರಿ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದ ವೇಳೆ; ಹೆಚ್ಚಿನ ತರಬೇತಿಗೆಂದು ಮೈಸೂರಿಗೆ ತೆರಳಿದ್ದ ತಮ್ಮ ಮಗ ದಿಢೀರ್ ಕಣ್ಮರೆಯಾಗಿದ್ದು, ಬಳಿಕ ಪಾಕಿಸ್ತಾನ ಜೈಲು ಪಾಲಾಗಿರುವ ಪ್ರಕರಣ ಸಂಬಂಧ; ಹೆತ್ತವರು ಮಗನನ್ನು ಮಡಿಲು ತುಂಬಿಕೊಳ್ಳಲು ಇದೀಗ ನ್ಯಾಯಾಂಗ ಮೊರೆ ಹೊಕ್ಕಿದ್ದಾರೆ.

ಗೋಣಿಕೊಪ್ಪಲು ಸಮೀಪದ ಕೈಕೇರಿ ನಿವಾಸಿ ಪಡಿಕಲ್ ಕುಶಾಲಪ್ಪ ಹಾಗೂ ಮೀನಾಕ್ಷಿ ದಂಪತಿಯ ಪುತ್ರ ಪಿ.ಕೆ. ಯಶವಂತ್ (29) ಎಂಬಾತನೇ ಈ ನತದೃಷ್ಟ. ಈತ ಗೋಣಿಕೊಪ್ಪಲುವಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಹೆಚ್ಚಿನ ತರಬೇತಿಗಾಗಿ ಪ್ರಾಂಶುಪಾಲ ಗೌರಿಶಂಕರ್ ಮಾರ್ಗದರ್ಶನದಲ್ಲಿ ಮೈಸೂರು ಜೆ.ಎಸ್.ಎಸ್. ಜನ ಶಿಕ್ಷಣ ಸಂಸ್ಥೆಗೆ ಸೇರ್ಪಡೆಗೊಂಡಿದ್ದ.

ಅಲ್ಲಿ ಆರು ತಿಂಗಳು ತರಬೇತಿಯನ್ನು ಪೂರೈಸಿದ್ದ ಮಗ ಯಶವಂತ್; ಒಂದು ದಿನ

(ಮೊದಲ ಪುಟದಿಂದ) ತಮಗೆ ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಉದ್ಯೋಗ ನಿಮಿತ್ತ ತೆರಳುತ್ತಿರುವದಾಗಿ ತಿಳಿಸಿದ್ದಾಗಿ; ತಾಯಿ ಮೀನಾಕ್ಷಿ ಅಳಲು ತೋಡಿಕೊಂಡಿದ್ದಾರೆ.

ಮರು ಕ್ಷಣದಿಂದ ತಮ್ಮ ಮಗ ದೂರವಾಣಿ ಸಂಪರ್ಕ ಕಡಿದುಕೊಂಡು; ಇದುವರೆಗೆ ಹೇಗಿದ್ದಾನೆ ಎಂದು ತಿಳಿದುಕೊಳ್ಳುವ ಸಹ ಸಾಧ್ಯವಾಗಿಲ್ಲ ಎಂದು ಹೆತ್ತವರು ರೋಧಿಸುತ್ತಿದ್ದಾರೆ.

ಪೊಲೀಸ್ ದೂರು : ತಮ್ಮ ಮಗ ಮೈಸೂರು ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದು, ಅಲ್ಲಿಂದ ಕಾಣೆಯಾದ ಬಗ್ಗೆ ದೂರು ನೀಡಲಾಗಿತ್ತು. ಬಳಿಕ ಪೊಲೀಸರು ಕೂಡ ಪ್ರಕರಣ ಸಂಬಂಧ ಫಲ ಕಾಣದೆ 2010ರಲ್ಲಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿ ತೆರೆ ಎಳೆದಿದ್ದರು.

ಅನಂತರದಲ್ಲಿ 2014ರಲ್ಲಿ ಮೈಸೂರಿನಿಂದ ಕಾಣೆಯಾಗಿದ್ದ ಯಶವಂತ್; ಪಾಕಿಸ್ತಾನದ ಲಾಹೋರ್ ಜೈಲು ಪಾಲಾಗಿರುವ ಕುರಿತು ರಾಷ್ಟ್ರಮಟ್ಟದ ಪತ್ರಿಕಾ ಸುದ್ದಿಯಿಂದ; ಪೋಷಕರಲ್ಲಿ ಮಗನಿಗಾಗಿ ಆಸೆ ಚಿಗುರೊಡೆಯಿತು. ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರ ಗಮನ ಸೆಳೆದ ಪೋಷಕರು ನ್ಯಾಯ ಕೋರಿದ್ದರು.

ಪೊಲೀಸ್ ಇಲಾಖೆಯು ಈ ಸಂಬಂಧ ಮಾಹಿತಿ ಕಲೆ ಹಾಕಿ ಕೊಡಗಿನ ಯುವಕ ಯಶವಂತ್ ಲಾಹೋರ್ ಜೈಲು ಪಾಲಾಗಿರುವ ಬಗ್ಗೆ ಖಚಿತ ಪಡಿಸಿದ್ದು, ‘ವಿಸಾ’ ವಿಲ್ಲದೆ ಶತ್ರು ರಾಷ್ಟ್ರ ಪ್ರವೇಶ ಹಿನ್ನೆಲೆ ಬಂಧನಗೊಂಡಿದ್ದಾಗಿ ಸುಳಿವು ನೀಡಿದ್ದರು.

ಸುಷ್ಮಾ ಸ್ವರಾಜ್ ಭೇಟಿ : ಮಗ ಯಶವಂತ್ ಪಾಕಿಸ್ತಾನ ಜೈಲಿನಲ್ಲಿರುವ ಕಾರಣ; ಹೇಗಾದರೂ ಪ್ರಯತ್ನಿಸಿ ಆತನನ್ನು ಬಿಡುಗಡೆಗೊಳಿಸಿ ತಾಯ್ನಾಡಿಗೆ ಕರೆತರುವ ಸಲುವಾಗಿ ಕುಶಾಲಪ್ಪ ಹಾಗೂ ಮೀನಾಕ್ಷಿ ಅವರುಗಳು; ಕಳೆದ ವರ್ಷ ಫೆಬ್ರವರಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದರು.

ಕೇಂದ್ರ ಮಾಹಿತಿ : ಈ ಬಗ್ಗೆ ವಿದೇಶಾಂಗ ಸಚಿವರು ಭಾರತೀಯ ರಾಜತಾಂತ್ರಿಕ ನೆಲೆಯಲ್ಲಿ; ಯಶವಂತ್‍ನ ಬಿಡುಗಡೆಗೆ ಮುಂದಾಗಿರುವ ಸನ್ನಿವೇಶದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಹದಗೆಡುವದರೊಂದಿಗೆ; ಯುವಕನ ಬಿಡುಗಡೆ ಕಷ್ಟ ಸಾಧ್ಯವಾಗಿದೆ ಎಂದು ಗೊತ್ತಾಗಿದೆ.

ನ್ಯಾಯಾಲಯದ ಮೊರೆ : ಹೀಗಾಗಿ ಇದೀಗ ಕುಶಾಲಪ್ಪ ಹಾಗೂ ಮೀನಾಕ್ಷಿ ದಂಪತಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೊಕ್ಕಿದ್ದು; ವಕೀಲ ಶ್ರೀನಿವಾಸರಾವ್ ಎಂಬವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಕೊಡಗಿನ ಎ.ಎಸ್. ಬೋಪಣ್ಣ ಅವರು ಪೋಷಕರ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದಾರೆ.

ಅಲ್ಲದೆ; ಪ್ರಕರಣ ಸಂಬಂಧ ಕೇಂದ್ರ ವಿದೇಶಾಂಗ ಸಚಿವಾಲಯ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಂಗ್ರಹಿಸಿ ನ್ಯಾಯಾಪೀಠಕ್ಕೆ ಸಲ್ಲಿಸುವಂತೆ ನ್ಯಾಯಾಧೀಶರು ಉಚ್ಛ ನ್ಯಾಯಾಲಯದ ಸಹಾಯಕ ಸಾಲಿಸಿಟರ್ ಜನರಲ್ ಕೆ.ಎಸ್. ದೀಕ್ಷಿತ್ ಅವರಿಗೆ ನಿರ್ದೇಶಿಸಿದ್ದಾರೆ.