ಮಡಿಕೇರಿ, ಮಾ. 17: ನಗರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀ ಮುತ್ತಪ್ಪ ಸ್ವಾಮಿ ಕ್ಷೇತ್ರವಾದ ಶ್ರೀ ಮುತ್ತಪ್ಪ ದೇವಾಲಯದ ದೇವರ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಮುತ್ತಪ್ಪ ಜಾತ್ರೆ ಹಾಗೂ ದೈವ ಕೋಲಗಳು ತಾ. 28 ರಿಂದ ಏ. 1 ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀ ಸುಬ್ರಹ್ಮಣ್ಯ, ಅಯ್ಯಪ್ಪ, ಶಕ್ತಿ ಗಣಪತಿ, ಭಗವತಿ, ನಾಗರಾಜ, ನಾಗಯಕ್ಷಿ, ನಾಗದೇವರ ಬನ, ಮುತ್ತಪ್ಪನ್, ತಿರುವಪ್ಪನ್, ವಿಷ್ಣುಮೂರ್ತಿ, ಮಹಾಗುಳಿಗ, ಶಿವಭೂತಂ, ಶ್ರೀಗುರು, ಪೊವ್ವದಿ, ಕುಟ್ಟಿಚಾತನ್, ಯಕ್ಷಿ ಸೇರಿದಂತೆ 14 ದೇವಾನುದೇವತೆಗಳ ಸಾನಿಧ್ಯವಿದ್ದು, ಈ ಬಾರಿ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರೆ ತಾ. 28 ರಂದು ಆರಂಭವಾಗಲಿದ್ದು, ವಿವಿಧ ಕಾರ್ಯಕ್ರಮಗಳೊಂದಿಗೆ ಏ. 1 ರವರೆಗೆ ಜರುಗಲಿದೆ. ತಾ. 28 ರಂದು ಬೆಳಿಗ್ಗೆ 6.30ಕ್ಕೆ ಕೇರಳದ ಅಡೂರಿನ ಶ್ರೀ ಮಾಂಗೂರು ಪಾರ್ಥಸಾರಥಿ ಸ್ಕಂದನ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಶಕ್ತಿ ಗಣಪತಿ ದೇವರ 108 ತೆಂಗಿನ ಕಾಯಿಗಳ ಮಹಾ ಗಣಪತಿ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಅಂದು ಸಂಜೆ 4.15 ರಿಂದ 5.20 ರ ಶುಭ ಮುಹೂರ್ತದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಯಿಂದ ದೀಪಾರಾಧನೆ, ವಾಸ್ತುಪೂಜೆ, ವಾಸ್ತುಬಲಿ ಮತ್ತಿತರ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ತಿಳಿಸಿದರು.

ತಾ. 29 ರಂದು ಬೆಳಿಗ್ಗೆ 8 ಗಂಟೆಯಿಂದ ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ, 1 ಗಂಟೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಭೂತಬಲಿ ಸೇವೆ ನಡೆಯಲಿದ್ದು, ತಾ. 30 ರಂದು ಬೆಳಿಗ್ಗೆ ನಾಗದೇವರಿಗೆ ಪ್ರಿಯವಾದ ನೂರುಂಪಾಲುಂ (ನಾಗತಂಬಿಲ) ಸಮರ್ಪಣೆ, ಸಂಜೆ 4.30 ರಿಂದ ಮುತ್ತಪ್ಪ ದೇವರ ಮಲೆ ಇಳಿಸುವದು, ಮುತ್ತಪ್ಪ ದೇವರ ವೆಳ್ಳಾಟಂ, 7.30ಕ್ಕೆ ಮೊದಕಲಶ ಸ್ಥಾಪನೆ ಕಾರ್ಯಕ್ರಮ ಜರುಗಲಿದೆ.

ತಾ. 31 ರಂದು ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಆರಂಭವಾಗಲಿದ್ದು, ಮೆರವಣಿಗೆಯಲ್ಲಿ ಕಡಗದಾಳು ಮತ್ತು ನೀರುಕೊಲ್ಲಿಯಿಂದ ಬರುವ ಶ್ರೀ ಮುತ್ತಪ್ಪ ದೇವರ ಕಲಶದೊಂದಿಗೆ ಮಹಿಳೆಯರು, ಮಕ್ಕಳ ತಾಲಾಪೊಲಿ, ಚೆಂಡೆ ವಾದ್ಯ, ಆಕರ್ಷಕ ಕಲಾತಂಡಗಳು ಪಾಲ್ಗೊಳ್ಳಲಿವೆ. ಅಂದು ಸಂಜೆ 4 ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವದು, ಬಳಿಕ ಶಾಸ್ತಪ್ಪ, ಮುತ್ತಪ್ಪ ವೆಳ್ಳಾಟಂ, ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ 8 ಗಂಟೆಗೆ ಪೊವ್ವದಿ ವೆಳ್ಳಾಟಂ, 9.30 ರಿಂದ ವಿಷ್ಣುಮೂರ್ತಿ ವೆಳ್ಳಾಟಂ, ಶವಿಭೂತ ತರೆ, ಕುಟ್ಟಿಚಾತನ್ ದೇವರ ತೆರೆ, ಕಳಗಪಾಟ್, ಸಂಧ್ಯಾವೇಲೆ, ಏ. 1 ರ ಬೆಳಗಿನ ಜಾವ ಮುತ್ತಪ್ಪ ಮತ್ತು ತಿರುವಪ್ಪ ತೆರೆ, ವಿಷ್ಣುಮೂರ್ತಿ ಮೇಲೇರಿ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಅಂದು ಪೂರ್ವಾಹ್ನ 11.30ಕ್ಕೆ ಧ್ವಜ ಅವರೋಹಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಸುಧೀರ್ ಮಾಹಿತಿ ನೀಡಿದರು.

ತಾ. 31 ರಂದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಅನ್ನಸಂತರ್ಪಣೆಗೆ ಅಗತ್ಯವಿರುವ ಅಕ್ಕಿ, ತರಕಾರಿ, ಎಣ್ಣೆ ಇತ್ಯಾದಿಗಳನ್ನು ದಾನಿಗಳು ಒಂದು ದಿನ ಮುಂಚಿತವಾಗಿ ದೇವಾಲಯಕ್ಕೆ ತಲಪಿಸಬಹುದಾಗಿದೆ. ಅಲ್ಲದೆ ತಾ. 28 ರಂದು ನಡೆಯುವ ಗಣಪತಿ ಹೋಮಕ್ಕೆ ಬೇಕಾದ ತುಪ್ಪ, ಕಬ್ಬು, ತೆಂಗಿನಕಾಯಿಗಳನ್ನು ಒಂದು ದಿನ ಮುಂಚಿತವಾಗಿ ನೀಡಬೇಕು. ಹರಕೆ ಕೋಲಗಳನ್ನು ಮಾಡಿಸುವವರು ತಾ. 29 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಮುತ್ತಪ್ಪ ದೇವರ ಕಲಶ ಮೆರವಣಿಗೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮಹಿಳಾ ವೇದಿಕೆ ಅಧ್ಯಕ್ಷೆ ಸಂಗೀತಾ ಪ್ರಸನ್ನ ಹಾಗೂ ಪ್ರಧಾನ ಕಾರ್ಯದರ್ಶಿ ಶಾರದಾ ರಾಮನ್ ಅವರುಗಳು ಮಾತನಾಡಿ, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ದೇವಾಲಯದ ವತಿಯಿಂದ ಮಹಿಳಾ ವೇದಿಕೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು. ತಾ. 31 ರಂದು ನಡೆಯಲಿರುವ ಮೆರವಣಿಗೆಯಲ್ಲಿ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು, ಸ್ತ್ರೀಶಕ್ತಿ ಸಂಘಟನೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಅಲ್ಲದೆ ಅಂದು ರಾತ್ರಿ 9.30 ರಿಂದ ಮಂಗಳೂರಿನ ಸೌರಭ ಕಲಾ ಪರಿಷತ್ ವತಿಯಿಂದ ಹಾಗೂ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮ ನೀಡಲಿಚ್ಛಿಸುವ ಸ್ಥಳೀಯ ಕಲಾವಿದರು ದೈವಿಕ ಹಿನ್ನೆಲೆಯ ನೃತ್ಯ ಅಥವಾ ಸಾಂಪ್ರದಾಯಿಕ ನೃತ್ಯಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ದೇವಾಲಯ ಸಮಿತಿ ಖಜಾಂಚಿ ಎನ್.ವಿ. ಉನ್ನಿಕೃಷ್ಣ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಹಾಗೂ ಮಹಿಳಾ ವೇದಿಕೆ ಉಪಾಧ್ಯಕ್ಷೆ ಪಾಲೆಯಂಡ ರೂಪಾ ಸುಬ್ಬಯ್ಯ ಹಾಜರಿದ್ದರು.