ವೀರಾಜಪೇಟೆ, ಮಾ. 17: 2017-18ನೇ ಸಾಲಿನ ಮೂರು ಹಂದಿ ಮಾಂಸ ಮಳಿಗೆಗಳು, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಸುಂಕ ಎತ್ತಾವಳಿಯಿಂದ ಪಟ್ಟಣ ಪಂಚಾಯಿತಿಗೆ ಕಳೆದ ಸಾಲಿಗಿಂತಲೂ ಈ ಬಾರಿ ರೂ. 30,950 ಅಧಿಕ ಆದಾಯ ಬಂದಿದೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಪುರಭವನದಲ್ಲಿ ಹರಾಜು ನಡೆಯಿತು. ವಾಹನ ಶುಲ್ಕ ಹಾಗೂ ಪೇ-ಪಾರ್ಕಿಂಗ್ ಹರಾಜಿನ ಬಿಡ್ ಪಂಚಾಯಿತಿ ನಿರೀಕ್ಷೆಯಂತೆ ಆದಾಯ ಬರಲಿಲ್ಲ ಎಂಬ ಕಾರಣಕ್ಕಾಗಿ ಈ ಹರಾಜನ್ನು ಮುಂದೂಡಲಾಯಿತು.
2015-16ರಲ್ಲಿ ಮೂರು ಹಂದಿ ಮಾಂಸ ಮಳಿಗೆಗಳು, ವಾಹನ ಸುಂಕ ಎತ್ತಾವಳಿ ಹಾಗೂ ವಾಹನ ನಿಲುಗಡೆ ಶುಲ್ಕ ಸೇರಿ ಒಟ್ಟು ರೂ. 5,19,400 ಹರಾಜು ಆಗಿ ಪಂಚಾಯಿತಿಗೆ ಆದಾಯ ಬಂದಿತ್ತು. ಇದೇ ರೀತಿಯಲ್ಲಿ 2016-17 ರಲ್ಲಿ ಹಂದಿಮಾಂಸ ಮಳಿಗೆಗಳು, ವಾಹನ ನಿಲುಗಡೆ ಶುಲ್ಕ ಸೇರಿ ಒಟ್ಟು ರೂ. 2,99,350ಕ್ಕೆ ಹರಾಜಾಗಿದೆ. ಇನ್ನು ವಾಹನ ನಿಲುಗಡೆ ಹರಾಜಾದರೆ ಈಗಿನ ಸಾಲಿಗಿಂತ ಅಧಿಕ ಲಾಭವಾಗುವ ಸಾಧ್ಯತೆ ಇದೆ.
ಬಿಡ್ನಲ್ಲಿ 9 ಮಂದಿ ಭಾಗವಹಿಸಿದ್ದು, ಹರಾಜು ಪ್ರಕ್ರಿಯೆಯ ವಾರ್ಷಿಕ ನಗದು ಹಣವನ್ನು ಬಿಡ್ದಾರರು ಸ್ಥಳದಲ್ಲಿಯೇ ಪಾವತಿಸಿದರು. ಹರಾಜಿನಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ. ಸುನಿತಾ, ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಹೇಮ್ ಕುಮಾರ್, ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.