ಕುಶಾಲನಗರ, ಮಾ. 17: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿ ನೂತನವಾಗಿ ಕೊರೆಯಲಾದ ಕೊಳವೆ ಬಾವಿಯನ್ನು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಲೋಕಾರ್ಪಣೆಗೊಳಿಸಿದರು. ಬಡಾವಣೆ ನಿವಾಸಿಗಳಿಗೆ ಕುಡಿವ ನೀರಿನ ಪೂರೈಕೆಗಾಗಿ ಬರ ನಿರ್ವಹಣೆ ಅನುದಾನದಡಿ ರೂ. 5 ಲಕ್ಷ ವೆಚ್ಚದಲ್ಲಿ ಕೊರೆಯಲಾದ ನೂತನ ಕೊಳವೆ ಬಾವಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ರಂಜನ್, ಜಿಲ್ಲೆಯಲ್ಲಿ ತೀವ್ರ ಬರದಿಂದಾಗಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದೆ. ಬರ ನಿರ್ವಹಣೆ ಅನುದಾನದಡಿ ಕೊಳವೆ ಬಾವಿಗಳನ್ನು ಕೊರೆಸುವ ಮೂಲಕ ಕುಡಿವ ನೀರಿನ ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಪ್ರಾಯೋಗಿಕವಾಗಿ ಸ್ಥಳೀಯ ನಿವಾಸಿಗಳಿಗೆ ಇದರ ನಿರ್ವಹಣೆಯ ಜವಾಬ್ದಾರಿ ವಹಿಸಲಾಗುವದು. ಆ ಮೂಲಕ ನೀರಿನ ಕರÀ ವಸೂಲಾತಿ, ನೀರು ಪೋಲಾಗುವದನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಈ ಪ್ರಯೋಗ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಅಗತ್ಯವಿರುವ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಚಿಂತನೆ ಹರಿಸಲಾಗಿದೆ ಎಂದರು.

ಈ ಸಂದರ್ಭ ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುದೀಪ್‍ಕುಮಾರ್, ಕಾರ್ಯದರ್ಶಿ ಕೆ.ಪಿ. ಚಂದ್ರಶೇಖರ್, ನಿರ್ದೇಶಕರಾದ ರವಿ ಬೋಪಯ್ಯ, ಪೂಣಚ್ಚ, ಮೊಣ್ಣಪ್ಪ, ಕುಶಾಲಪ್ಪ, ಬಿಜೆಪಿ ನಗರಾಧ್ಯಕ್ಷ ಕೆ.ಜಿ. ಮನು, ಕಾರ್ಯದರ್ಶಿ ಹೆಚ್.ಡಿ. ಶಿವಾಜಿ, ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ನಗರ ಕಾರ್ಯದರ್ಶಿ ನಿಡ್ಯಮಲೆ ದಿನೇಶ್ ಸೇರಿದಂತೆ ಬಡಾವಣೆಯ ಪ್ರಮುಖರು ಇದ್ದರು.